IND Vs AUS 3rd Test: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮೇಲೆ ಭಾರತದ ಕಣ್ಣು: ತಿರುಗಿ ಬೀಳುತ್ತಾ ಆಸ್ಟ್ರೇಲಿಯಾ?

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸನಿಹವಾಗಿದೆ. ಇಂದೋರ್ ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಗೆದ್ದರೆ ಭಾರತ ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಇಂದೋರ್ ಟೆಸ್ಟ್‌ನಲ್ಲಿ ಗೆದ್ದು ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುಲ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮಾ ಪಡೆ. ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವಲ್‌ನಲ್ಲಿ ಡಬ್ಲ್ಯುಟಿಸಿ ಫೈನಲ್ ಪಂದ್ಯ ನಡೆಯಲಿದೆ.
ಇನ್ನು ವಿಶ್ವದ ನಂಬರ್ 1 ಟೆಸ್ಟ್ ತಂಡವಾಗಿರುವ ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದೆ. ಮೂರನೇ ಟೆಸ್ಟ್‌ಗೆ ಪ್ಯಾಟ್ ಕಮ್ಮಿನ್ಸ್ ಅಲಭ್ಯರಾಗಿದ್ದು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೊದಲ ಎರಡು ಪಂದ್ಯಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಕಾಂಗರೂ ಪಡೆ.
ಭಾರತ ತಂಡಕ್ಕೆ ಉಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ ಸಾಕು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲಿದೆ. ಆಸ್ಟ್ರೇಲಿಯಾ ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಫೈನಲ್‌ಗೆ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಉಳಿದ ಎರಡೂ ಪಂದ್ಯಗಳನ್ನು ಸೋತರೆ ಶ್ರೀಲಂಕಾಗೆ ಫೈನಲ್ ತಲುಪಲು ಅವಖಾಶ ಸಿಗುತ್ತದೆ.

ಶುಭಮನ್ ಗಿಲ್‌ಗೆ ಅವಕಾಶ?
3ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಕೆಎಲ್ ರಾಹುಲ್ ಮೂರನೇ ಟೆಸ್ಟ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದ್ದು, ಅವರ ಬದಲಿಗೆ ಶುಭಮನ್ ಗಿಲ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಕೆಎಲ್ ರಾಹುಲ್ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದ್ದು, ಗೆದ್ದ ತಂಡವನ್ನೇ ಮುಂದುವರೆಸಲು ಬಯಸಿದರೆ, ತಂಡದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಟಾಸ್ ನಂತರವೇ ಪ್ಲೇಯಿಂಗ್ ಇಲೆವೆನ್ ಬಹಿರಂಗಪಡಿಸುವುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ.

ಸ್ಟಾರ್ಕ್, ಗ್ರೀನ್ ತಂಡಕ್ಕೆ ವಾಪಸ್?
ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಮತ್ತು ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 3ನೇ ಟೆಸ್ಟ್‌ನಲ್ಲಿ ಆಡುವುದು ಖಚಿತವಾಗಿದೆ. 100 ಪ್ರತಿಶತ ಫಿಟ್ ಆಗಿಲ್ಲವಾದರೂ 3ನೇ ಟೆಸ್ಟ್‌ನಲ್ಲಿ ಆಡುತ್ತೇನೆ ಎಂದು ಮಿಚೆಲ್ ಸ್ಟಾರ್ಕ್ ಈಗಾಗಲೇ ಘೋಷಿಸಿದ್ದಾರೆ.
ನಾಯಕ ಪ್ಯಾಟ್ ಕಮ್ಮಿನ್ಸ್ ತಾಯಿಯ ಅನಾರೋಗ್ಯದ ಕಾರಣ ಆಸ್ಟ್ರೇಲಿಯಾಗೆ ತೆರಳಿದ್ದು, ಸರಣಿಯ ಕೊನೆಯ ಟೆಸ್ಟ್ ಪಂದ್ಯಕ್ಕೂ ಅಲಭ್ಯವಿರುವುದಾಗಿ ಹೇಳಿದ್ದಾರೆ. ಮುಂದಿನ ಎರಡೂ ಪಂದ್ಯಗಳಿಗೆ ಸ್ಟೀವ್ ಸ್ಮಿತ್ ಸಾರಥ್ಯ ವಹಿಸಲಿದ್ದಾರೆ.

ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು
ಇಂದೋರ್ ನ ಹೋಳ್ಕರ್ ಸ್ಟೇಡಿಯಂ ವಿಶ್ವದ ಚಿಕ್ಕ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿದೆ. ಭಾರತ ಇಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇಂದೋರ್ ಪಿಚ್ ಕೂಡ ದೆಹಲಿ ಮತ್ತು ನಾಗ್ಪುರ ಪಿಚ್‌ಗಳಂತೆ ಸ್ಪಿನ್‌ಗೆ ನೆರವಾಗುವ ಸಾಧ್ಯತೆ ಇದೆ.
ಇಂದೋರ್‌ನಲ್ಲಿ 2 ಟೆಸ್ಟ್‌ಗಳಲ್ಲಿ 18 ವಿಕೆಟ್ ಪಡೆದಿರುವ ಆರ್ ಅಶ್ವಿನ್, ಆಫ್ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಮತ್ತೆ ಆಸ್ಟ್ರೇಲಿಯಾಗೆ ಮಾರಕವಾಗುವ ಸಾಧ್ಯತೆ ಇದೆ. ಭಾರತದ ಸ್ಪಿನ್ ದಾಳಿಯನ್ನು ಎದುರಿಸಲು ಸ್ಟೀವ್ ಸ್ಮಿತ್ ಹೇಗೆ ಸಿದ್ಧವಾಗಿದ್ದಾರೆ ಎನ್ನುವುದು ಇಂದೋರ್ ಟೆಸ್ಟ್‌ನಲ್ಲಿ ತಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications