IND vs AUS 3rd Test: ಮೂರೇ ದಿನಕ್ಕೆ ಮುಗಿಯಲಿದೆ ಇಂದೋರ್ ಟೆಸ್ಟ್: ಪಿಚ್ ಬಗ್ಗೆ ಸಾಕಷ್ಟು ಟೀಕೆ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳು ಮೂರೇ ದಿನಕ್ಕೆ ಮುಕ್ತಾಯವಾಗಿದ್ದವು. ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು.
ಈಗ ನಡೆಯುತ್ತಿರುವ ಇಂದೋರ್ ಟೆಸ್ಟ್ ಕೂಡ ಮೂರೇ ದಿನಕ್ಕೆ ಮುಕ್ತಾಯವಾಗುವ ಹಂತದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 76 ರನ್ ಗಳಿಸಿದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲಿದೆ.
ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಿದ್ದ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರಿಗೆ ಈ ಸರಣಿ ನಿರಾಸೆ ಉಂಟುಮಾಡಿದೆ. ಮೊದಲ ಎರಡು ಟೆಸ್ಟ್‌ಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಿದರೆ, ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.
ಇಂದೋರ್ ನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಮೊದಲ ದಿನ 14 ವಿಕೆಟ್ ಪತನವಾದರೆ, ಎರಡನೇ ದಿನ ಬರೋಬ್ಬರಿ 16 ವಿಕೆಟ್‌ಗಳು ಉರುಳಿದವು. ಇದು ಈಗ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಪಿಚ್ ಕ್ಯುರೇಟರ್ ಗಳು ಮತ್ತು ಬಿಸಿಸಿಐ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗರು ಕೂಡ ಮೊದಲ ಮೂರು ಪಂದ್ಯಗಳಿಗೆ ಸಿದ್ಧಪಡಿಸಿದ ಪಿಚ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರೇ ದಿನಕ್ಕೆ ಮುಗಿದ ಟೆಸ್ಟ್
ನಾಗ್ಪುರ ಮತ್ತು ದೆಹಲಿ ಪಿಚ್‌ಗಿಂತ ಇಂದೋರ್ ಪಿಚ್ ಕಳಪೆಯಾಗಿದೆ. ಈ ಮೊದಲು ಪಂದ್ಯವನ್ನು ಧರ್ಮಶಾಲಾದಲ್ಲಿ ನಡೆಸಲು ನಿರ್ಧಾರ ಮಾಡಲಾಗಿತ್ತು, ಆದರೆ ಕ್ರೀಡಾಂಗಣದ ನವೀಕರಣ ಕೆಲಸ ಇನ್ನೂ ಮುಗಿಯದ ಕಾರಣ ಮೂರನೇ ಟೆಸ್ಟ್ ಅನ್ನು ಇಂದೋರ್ ಗೆ ಸ್ಥಳಾಂತರ ಮಾಡಲಾಗಿತ್ತು.
ಇಂದೋರ್ ನಲ್ಲಿ ಈ ಮೊದಲು ನಡೆದಿದ್ದ ಎರಡು ಪಂದ್ಯಗಳಲ್ಲಿ 500 ಕ್ಕಿಂತ ಹೆಚ್ಚಿನ ರನ್ ಗಳಿಸಿದ್ದವು. ಚಿಕ್ಕ ಬೌಂಡರಿಗಳನ್ನು ಹೊಂದಿದ್ದ ಕಾರಣ ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಲಾಗಿತ್ತು ಆದರೆ ಮೊದಲ ದಿನವೇ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ.

ಮಾಜಿ ಕ್ರಿಕೆಟಿಗ ವೆಂಗ್‌ಸರ್ಕರ್ ಟೀಕ್
ಮೂರು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡುವಂತೆ ಪಿಚ್ ನಿರ್ಮಿಸಿರುವುದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಕೂಡ ಪಿಚ್ ಬಗ್ಗೆ ಟೀಕಿಸಿದ್ದಾರೆ.
"ನೀವು ಉತ್ತಮ ಕ್ರಿಕೆಟ್ ಪಂದ್ಯವನ್ನು ನೋಡಬೇಕೆಂದು ಬಯಸಿದರೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಇಬ್ಬರೂ ಸಮಾನ ಲಾಭವನ್ನು ಪಡೆಯುವಂತೆ ಇನ್ನೂ ಬೌನ್ಸ್‌ನೊಂದಿಗೆ ವಿಕೆಟ್‌ಗಳನ್ನು ನಿರ್ಮಿಸಬೇಕು. ಚೆಂಡು ಮೊದಲ ದಿನದ ಮೊದಲನೇ ಓವರ್ ನಿಂದಲೇ ಕಡಿಮೆ ಬೌನ್ಸ್‌ನೊಂದಿಗೆ ತಿರುಗಿದರೆ ಅದು ಟೆಸ್ಟ್ ಕ್ರಿಕೆಟ್‌ಅನ್ನು ಅಪಹಾಸ್ಯ ಮಾಡುತ್ತದೆ" ಎಂದು ಟೀಕಿಸಿದ್ದಾರೆ.
"ಟೆಸ್ಟ್ ವಿಕೆಟ್ ತಯಾರಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಪಿಚ್‌ಗಳಿಗೆ ವಿಶ್ರಾಂತಿ ಬೇಕು. ಈ ಸಂದರ್ಭದಲ್ಲಿ, ರಣಜಿ ಟ್ರೋಫಿ ಸೆಮಿಫೈನಲ್ ಮತ್ತು ಈ ಆಟದ ನಡುವೆ ಎರಡು ವಾರಗಳ ಸಮಯವೂ ಇರಲಿಲ್ಲ. ಅದಕ್ಕೂ ಮೊದಲು, ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯವನ್ನು ಆಡಲಾಯಿತು. ಪಿಚ್ ಈ ರೀತಿ ವರ್ತಿಸಲು ಕಾರಣ ಇದು" ಎಂದು ಹೇಳಲಾಗಿದೆ.

ಸರಣಿಯಲ್ಲಿ ಸ್ಪಿನ್ನರ್ ಗಳದ್ದೇ ಆಟ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸ್ಪಿನ್ನರ್ ಗಳೇ ಪ್ರಾಬಲ್ಯ ಸಾಧಿಸಿದ್ದಾರೆ. ಭಾರತ ಆಸ್ಟ್ರೇಲಿಯಾ ಸೇರಿ ಒಟ್ಟು ಆರು ಸ್ಪಿನ್ನರ್ ಗಳು ಮೂರು ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 77 ವಿಕೆಟ್ ಪಡೆದುಕೊಂಡಿದ್ದಾರೆ.
ರವೀಂದ್ರ ಜಡೇಜಾ 5 ಇನ್ನಿಂಗ್ಸ್‌ಗಳಿಂದ 21 ವಿಕೆಟ್ ಪಡೆದುಕೊಂಡಿದ್ದರೆ, ನಾಥನ್ ಲಿಯಾನ್ 6 ಇನ್ನಿಂಗ್ಸ್‌ಗಳಿಂದ 19 ವಿಕೆಟ್ ಪಡೆದುಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ 17 ವಿಕೆಟ್ ಪಡೆದುಕೊಂಡಿದ್ದಾರೆ. ಟಾಡ್ ಮುರ್ಫಿ ಮತ್ತು ಮ್ಯಾಥ್ಯೂ ಕುಹ್ನೆಮನ್ ಕ್ರಮವಾಗಿ 11 ಮತ್ತು 8 ವಿಕೆಟ್ ಪಡೆದುಕೊಂಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಕೊನೆಯ ಟೆಸ್ಟ್ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಅಲ್ಲಿಯಾದರೂ 5 ದಿನ ಪಂದ್ಯ ನಡೆಯುವಂತಹ ಪಿಚ್ ನಿರ್ಮಿಸಿ ಎಂದು ಒತ್ತಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications