
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿಯುವ ಜೊತೆಗೆ ನಾಥನ್ ಲಿಯಾನ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ 20 ಪಂದ್ಯಗಳಿಂದ 111 ವಿಕೆಟ್ ಪಡೆದುಕೊಂಡಿದ್ದ ಅನಿಲ್ ಕುಂಬ್ಳೆ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ನಾಥನ್ ಲಿಯಾನ್ 26 ಟೆಸ್ಟ್ ಪಂದ್ಯಗಳಿಂದ 113 ವಿಕೆಟ್ ಪಡೆದು, ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
ರವಿಚಂದ್ರನ್ ಅಶ್ವಿನ್ 22 ಟೆಸ್ಟ್ ಪಂದ್ಯಗಳಿಂದ 113 ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. 4ನೇ ಟೆಸ್ಟ್‌ನಲ್ಲಿ ನಾಥನ್ ಲಿಯಾನ್‌ಗಿಂತ ಹೆಚ್ಚು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ ಲಿಯಾನ್ ದಾಖಲೆಯನ್ನು ಹಿಂದಿಕ್ಕಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಆರು ವಿಕೆಟ್ ಪಡೆದು ಮಿಂಚಿದ ಅಶ್ವಿನ್
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅಶ್ವಿನ್ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾವನ್ನು 480 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರವಿಚಂದ್ರನ್ ಅಶ್ವಿನ್ 2023ರ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 4 ಪಂದ್ಯಗಳಿಂದ 15.58 ಸರಾಸರಿಯಲ್ಲಿ 24 ವಿಕೆಟ್ ಪಡೆದು ಮೊದಲನೇ ಸ್ಥಾನದಲ್ಲಿದ್ದಾರೆ. 22 ವಿಕೆಟ್ ಪಡೆದಿರುವ ರವೀಂದ್ರ ಜಡೇಜಾ 2ನೇ ಸ್ಥಾನದಲ್ಲಿದ್ದಾರೆ.

473 ವಿಕೆಟ್‌ಗಳ ಸಾಧನೆ
ಇದುವರೆಗೂ 92 ಟೆಸ್ಟ್ ಪಂದ್ಯಗಳನ್ನು ಆಡಿರುವ ರವಿಚಂದ್ರನ್ ಅಶ್ವಿನ್ 173 ಇನ್ನಿಂಗ್ಸ್‌ಗಳಿಂದ 473 ವಿಕೆಟ್ ಪಡೆದುಕೊಂಡಿದ್ದಾರೆ. 32 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದು, 7 ಬಾರಿ 10 ವಿಕೆಟ್ ಪಡೆದು ಮಿಂಚಿದ್ದಾರೆ. ಬ್ಯಾಟಿಂಗ್‌ನಲ್ಲಿ ಕೂಡ ಮಿಂಚಿರುವ ಅಶ್ವಿನ್ 130 ಇನ್ನಿಂಗ್ಸ್‌ಗಳಿಂದ 27.15 ಸರಾಸರಿಯಲ್ಲಿ 3122 ರನ್ ಗಳಿಸಿದ್ದಾರೆ.
ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಬೌಲರ್ ಎನಿಸಿಕೊಂಡಿರುವ ಅಶ್ವಿನ್ ಭಾರತ ಪಾಲಿಗೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಅಶ್ವಿನ್ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್‌ಗಳಿಗೆ ಆಲೌಟ್ ಆಗಿದೆ.