Ind Vs Aus 4th Test: ಅಹಮದಾಬಾದ್ ಟೆಸ್ಟ್ ಡ್ರಾನಲ್ಲಿ ಅಂತ್ಯ: ಸರಣಿ ಗೆದ್ದು, ಫೈನಲ್ ತಲುಪಿದ ಭಾರತ

ನಿರೀಕ್ಷೆಯಂತೆ ಅಹಮದಾಬಾದ್ ಟೆಸ್ಟ್ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. 5ನೇ ದಿನದಾಟ ಮುಕ್ತಾಯಕ್ಕೆ ಮುನ್ನವೇ ಎರಡೂ ತಂಡಗಳ ಆಟಗಾರರ ಒಪ್ಪಿಗೆಯ ಮೇರೆಗೆ ಪಂದ್ಯವನ್ನು 2.30 ಗಂಟೆಗಳ ಮುನ್ನವೇ ಡ್ರಾ ಎಂದು ಘೋಷಿಸಲಾಯಿತು. ಈ ಮೂಲಕ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.
ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯವನ್ನು ಗೆದ್ದಿದ್ದು, ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಜೂನ್ 7ರಿಂದ ಭಾರತ ಮತ್ತು ಆಸ್ಟ್ರೇಲಿಯಾ ಇಂಗ್ಲೆಂಡ್‌ನ ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಆಡಲಿವೆ.
ಅಹಮದಾಬಾದ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಅತ್ಯುತ್ತಮ ಮೊತ್ತ ಕಲೆಹಾಕಿತು. ಕ್ಯಾಮೆರಾನ್ ಗ್ರೀನ್ ಮತ್ತು ಉಸ್ಮಾನ್ ಖವಾಜಾ ಅಮೋಘ ಶತಕದ ನೆರವಿನಿಂದ ಮೊದಲನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 480 ರನ್ ಗಳಿಸಿ ಆಲೌಟ್ ಆಯಿತು.
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 571 ರನ್‌ಗಳಿಗೆ ಆಲೌಟ್ ಆಗುವ ಮೂಲಕ 91 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಅವಧಿಗೂ ಮುನ್ನವೆ ಅಂತ್ಯ
4ನೇ ದಿನದ ಕೊನೆಯಲ್ಲಿ ಕೇವಲ 6 ಓವರ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿತ್ತು. 5ನೇ ದಿನ ಆಟ ಮುಂದುವರೆಸಿದ ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮ್ಯಾಥ್ಯೂ ಕುಹ್ನೆಮನ್ 6 ರನ್ ಗಳಿಸಿ ಔಟಾದರೆ, ಟ್ರಾವಿಸ್ ಹೆಡ್ 90 ರನ್ ಗಳಿಸಿದರು.
ಮಾರ್ನಸ್ ಲ್ಯಾಬುಸ್ಚಾಗ್ನೆ ಅಜೇಯ 63 ರನ್ ಗಳಿಸಿದರು, ನಾಯಕ ಸ್ಟೀವ್ ಸ್ಮಿತ್ ಅಜೇಯ 10 ರನ್ ಗಳಿಸಿದ್ದಾಗ ಉಭಯ ತಂಡದ ನಾಯಕರು ಚರ್ಚೆ ಮಾಡಿದ ಬಳಿಕ ಪಂದ್ಯವನ್ನು ಮುಗಿಸಲು ತೀರ್ಮಾನಿಸಿದರು. ಇದರೊಂದಿಗೆ ಸರಣಿಯ ಕೊನೆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಆಟಗಾರ
ಅಮೋಘ ಶತಕ ಬಾರಿಸುವ ಮೂಲಕ ಭಾರತ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ಕಾರಣವಾದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. 364 ಎಸೆತಗಳಲ್ಲಿ 15 ಬೌಂಡರಿ ಸಹಿತ 186 ರನ್ ಗಳಿಸಿದ್ದ ಕೊಹ್ಲಿ, ತಮ್ಮ 75ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಸಾಧನೆ ಮಾಡಿದರು.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 107 ರನ್ ಗಳಿಸಿದ್ದು ಮಾತ್ರವಲ್ಲದೆ. 21 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದ ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸತತ 4ನೇ ಬಾರಿ ಭಾರತಕ್ಕೆ ಗೆಲುವು
2107 ರಿಂದ ಈವರೆಗೆ ನಡೆದ ನಾಲ್ಕು ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಎಲ್ಲಾ ನಾಲ್ಕು ಸರಣಿಗಳನ್ನು ಭಾರತ 2-1 ಅಂತರದಲ್ಲೇ ಗೆದ್ದುಕೊಂಡಿರುವುದು ವಿಶೇಷ. 2017ರ ಸರಣಿಯಲ್ಲಿ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರೆ, 2019ರಲ್ಲಿ ನಡೆದ ಸರಣಿಯಲ್ಲಿ 4ನೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.
2021ರಲ್ಲಿ ನಡೆದ ಸರಣಿಯಲ್ಲಿ 3ನೇ ಪಂದ್ಯ ಡ್ರಾ ಆಗಿದ್ದರೆ, 2023ರಲ್ಲಿ 4ನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಸರಣಿಯಲ್ಲಿ ಭಾರತ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಇಂದೋರ್ ಟೆಸ್ಟ್‌ನಲ್ಲಿ 9 ವಿಕೆಟ್‌ಗಳಿಂದ ಸೋಲನುಭವಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications