Ind Vs Aus 4th Test: ಕೊಹ್ಲಿ ಭರ್ಜರಿ ಶತಕ, ಅಕ್ಷರ್ ಪಟೇಲ್ ಅಬ್ಬರ : ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಭಾರತ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಶುಭಮನ್ ಗಿಲ್, ವಿರಾಟ್ ಕೊಹ್ಲಿ ಅಮೋಘ ಶತಕ, ಅಕ್ಷರ್ ಪಟೇಲ್ ಅತ್ಯುತ್ತಮ ಅರ್ಧಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 571 ರನ್‌ಗಳಿಗೆ ಆಲೌಟ್ ಆಗುವ ಮೂಲಕ 91 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.
ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದ್ದ ಭಾರತ ತಂಡ 4ನೇ ದಿನ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. 3ನೇ ದಿನದಾಟದ ಅಂತ್ಯಕ್ಕೆ 16 ರನ್ ಗಳಿಸಿದ್ದ ರವೀಂದ್ರ ಜಡೇಜಾ 28 ರನ್ ಗಳಿಸುವಷ್ಟರಲ್ಲಿ 4ನೇ ದಿನದ ಆರಂಭದಲ್ಲೇ ವಿಕೆಟ್ ಒಪ್ಪಿಸಿದರು.
ಮೂರನೇ ದಿನದಾಟದ ಅಂತ್ಯಕ್ಕೆ 59 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ನಾಲ್ಕನೇ ದಿನ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೂರು ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 28ನೇ ಶತಕ ಗಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 75 ಶತಕ ಪೂರೈಸಿದರು.
ವಿಕೆಟ್ ಕೀಪರ್ ಬ್ಯಾಟರ್ ಶ್ರೀಕರ್ ಭರತ್ ಕೂಡ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 88 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಹಿತ 44 ರನ್ ಗಳಿಸಿ ಔಟಾದರು. ನಂತರ ಬಂದ ಅಕ್ಷರ್ ಪಟೇಲ್ ಅಮೋಘ ಇನ್ನಿಂಗ್ಸ್ ಆಡಿದರು. 113 ಎಸೆತಗಳಲ್ಲಿ 5 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 79 ರನ್ ಗಳಿಸಿ ಔಟಾದರು.

ವಿರಾಟ್ ಕೊಹ್ಲಿ, ಅಕ್ಷರ್ ಅಮೋಘ ಆಟ
ನಾಲ್ಕನೇ ದಿನ ಅಹಮದಾಬಾದ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಮರೆಯಲಾರದ ಇನ್ನಿಂಗ್ಸ್ ಆಡಿದರು. ಎಚ್ಚರಿಕೆಯಿಂದ ರನ್ ಗಳಿಸಿದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ 75ನೇ ಶತಕ ಗಳಿಸಿದರು. ಶತಕ ಗಳಿಸಿದ ನಂತರ ಬೌಂಡರಿಗಳನ್ನು ಹೊಡೆಯಲು ಆರಂಭಿಸಿದ ವಿರಾಟ್ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟರು.
ಅಕ್ಷರ್ ಪಟೇಲ್ ಔಟಾದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಬೆನ್ನು ನೋವಿನ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ರವಿಚಂದ್ರನ್ ಅಶ್ವಿನ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಉಮೇಶ್ ಯಾದವ್ ಶೂನ್ಯಕ್ಕೆ ರನೌಟ್ ಆದರು. ಅಂತಿಮವಾಗಿ ವಿರಾಟ್ ಕೊಹ್ಲಿ 364 ಎಸೆತಗಳಲ್ಲಿ 15 ಬೌಂಡರಿ ಸಹಿತ 186 ರನ್ ಗಳಿಸಿದರು. ಮೊದಲನೇ ಇನ್ನಿಂಗ್ಸ್‌ನಲ್ಲಿ 571 ರನ್‌ಗಳಿಗೆ ಆಲೌಟ್ ಆದ ಭಾರತ 91 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಆಸ್ಟ್ರೇಲಿಯಾದ ಎಚ್ಚರಿಕೆಯ ಆರಂಭ
ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತು. ಉಸ್ಮಾನ್ ಖವಾಜಾ ಗಾಯಗೊಂಡಿದ್ದರಿಂದ ಟ್ರಾವಿಸ್ ಹೆಡ್ ಜೊತೆ ಮ್ಯಾಥ್ಯೂ ಕುಹ್ನೆಮನ್ ಬ್ಯಾಟಿಂಗ್ ಆರಂಭಿಸಿದರು.
ನಾಲ್ಕನೇ ದಿನದಾಟದ ವೇಳೆಗೆ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ. ಟ್ರಾವಿಸ್ ಹೆಡ್ ಅಜೇಯ 3 ರನ್ ಗಳಿಸಿದ್ದು, 18 ಎಸೆತಗಳನ್ನು ಎದುರಿಸಿದ ಮ್ಯಾಥ್ಯೂ ಕುಹ್ನೆಮನ್ ಖಾತೆ ತೆರೆಯದೆ ಅಜೇಯರಾಗಿ ಉಳಿದುಕೊಂಡಿದ್ದಾರೆ.

ಬೌಲರ್ ಗಳು ಮಿಂಚಿದರೆ ಭಾರತಕ್ಕೆ ಗೆಲುವು
ಮೊದಲನೇ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಪಡೆದುಕೊಂಡಿರುವ ಭಾರತ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. 5ನೇ ದಿನದಾಟದ ಬಾಕಿ ಇದ್ದು, ಭಾರತದ ಬೌಲರ್ ಗಳು ಮಿಂಚಿದರೆ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ. 90 ಓವರ್ ಗಳ ಆಟದಲ್ಲಿ ಆಸ್ಟ್ರೇಲಿಯಾವನ್ನು ಆದಷ್ಟು ಬೇಗನೆ ಆಲೌಟ್ ಮಾಡಿದರೆ, ಭಾರತ ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟುವುದು ಸುಲಭವಾಗಲಿದೆ.
ಒಂದು ವೇಳೆ ವಿಕೆಟ್ ಪಡೆಯುವಲ್ಲಿ ವಿಫಲವಾದರೆ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಲಿದೆ. ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಭಾರತ 2-1 ಅಂತರದಲ್ಲಿ ಸರಣಿಯಲ್ಲಿ ಗೆಲುವು ಸಾಧಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications