Ind Vs Aus 4th Test: 6 ವಿಕೆಟ್ ಪಡೆದ ಅಶ್ವಿನ್ : 480 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್, ಭಾರತದ ಉತ್ತಮ ಆರಂಭ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 480 ರನ್‌ಗಳಿಗೆ ಆಲೌಟ್ ಆಗಿದೆ. ಎರಡನೇ ದಿನದಾಟದ ಮುಕ್ತಾಯಕ್ಕೆ ಇನ್ನು ಒಂದು ಗಂಟೆ ಸಮಯ ಇರುವಾಗ ಭಾರತ ಆಸ್ಟ್ರೇಲಿಯಾವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ನಂತರ ಬ್ಯಾಟಿಂಗ್ ಮಾಡಿದ ಭಾರತ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ.
ರವಿಚಂದ್ರನ್ ಅಶ್ವಿನ್ ಪ್ರಮುಖ ಆರು ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾವನ್ನು ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಸ್ಮಾನ್ ಖವಾಜಾ ಮತ್ತು ಕ್ಯಾಮೆರಾನ್ ಗ್ರೀನ್ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.
ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿದ್ದ ಆಸ್ಟ್ರೇಲಿಯಾ ಎರಡನೇ ದಿನ ಅತ್ಯುತ್ತಮವಾಗಿ ಆರಂಭಿಸಿತು. ಮೊದಲ ದಿನದಾಟದ ಅಂತ್ಯಕ್ಕೆ 49 ರನ್ ಗಳಿಸಿದ್ದ ಕ್ಯಾಮೆರಾನ್ ಗ್ರೀನ್ ಎರಡನೇ ದಿನ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದ ಕ್ಯಾಮೆರಾನ್ ಗ್ರೀನ್, ಉಸ್ಮಾನ್ ಖವಾಜ ಜೊತೆಗೆ 208 ರನ್‌ಗಳ ಜೊತೆಯಾಟ ಆಡುವ ಮೂಲಕ ಭಾರತ ತಂಡದ ಬೌಲರ್ ಗಳನ್ನು ಕಾಡಿದರು.

ಕ್ಯಾಮೆರಾನ್ ಗ್ರೀನ್ ಮೊದಲ ಶತಕ
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಾಧನೆ ಮಾಡಿದರು. ಉಸ್ಮಾನ್ ಖವಾಜ ಒಂದು ಕಡೆ ತಾಳ್ಮೆಯ ಬ್ಯಾಟಿಂಗ್ ಮಾಡಿದರೆ, ಗ್ರೀನ್ ಬೌಂಡರಿಗಳನ್ನು ಗಳಿಸುತ್ತಿದ್ದರು. 170 ಎಸೆತಗಳಲ್ಲಿ 18 ಬೌಂಡರಿ ಸಹಿತ 114 ರನ್ ಗಳಿಸಿ ಗ್ರೀನ್ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಕೀಪರ್ ಶ್ರೀಕರ್ ಭರತ್‌ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬ್ಯಾಟಿಂಗ್ ಮುಂದುವರೆಸಿದ ಖವಾಜ ತಾಳ್ಮೆಯ 180 ರನ್‌ಗಳನ್ನು ಕಲೆ ಹಾಕಿದರು. ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ ಅವರ ಅಮೋಘ ಇನ್ನಿಂಗ್ಸ್ ಅಂತ್ಯವಾಯಿತು. ಟಾಡ್ ಮರ್ಫಿ ಮತ್ತು ನಾಥನ್ ಲಿಯಾನ್ ಕೊನೆಯಲ್ಲಿ ಭಾರತವನ್ನು ಕಾಡಿದರು. ನಾಥನ್ ಲಿಯಾನ್ 34 ರನ್ ಗಳಿಸಿದರೆ, ಟಾಡ್ ಮರ್ಫಿ ಅಮೂಲ್ಯ 41 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 480 ರನ್ ಗಳಿಸಿ ಆಲೌಟ್ ಆಯಿತು.

ಅಶ್ವಿನ್ ಸ್ಪಿನ್ ಮೋಡಿ
ರವಿಚಂದ್ರನ್ ಅಶ್ವಿನ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 6 ಪ್ರಮುಖ ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಭಾರತಕ್ಕೆ ಆಸರೆಯಾದರು. 6 ವಿಕೆಟ್ ಪಡೆದ ಅವರು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದರು.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ನಾಥನ್ ಲಿಯಾನ್ 113 ವಿಕೆಟ್ ಪಡೆದಿದ್ದು ಅಶ್ವಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರೆ, ವೇಗಿ ಮೊಹಮ್ಮದ್ ಶಮಿ 2 ವಿಕೆಟ್ ಪಡೆದು ಮಿಂಚಿದರು.

ಗಿಲ್-ರೋಹಿತ್ ಭರವಸೆಯ ಆರಂಭ
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭವನ್ನೇ ಪಡೆದಿದೆ. 10 ಓವರ್ ಗಳನ್ನು ಎಚ್ಚರಿಕೆಯಿಂದ ಆಡಿದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅಜೇಯ 35 ರನ್ ಗಳ ಜೊತೆಯಾಟ ಆಡುವಲ್ಲಿ ಯಶಸ್ವಿಯಾಗಿದ್ದಾರೆ.
ರೋಹಿತ್ ಶರ್ಮಾ 33 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿದರೆ, ಶುಭಮನ್ ಗಿಲ್ 27 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ಸಹಿತ 18 ರನ್ ಗಳಿಸಿದರು. ಭಾರತ ಇನ್ನೂ 444 ರನ್‌ಗಳಿಂದ ಹಿಂದಿದ್ದು ಮೂರನೇ ದಿನದಲ್ಲಿ ವಿಕೆಟ್ ಕಾಪಾಡಿಕೊಳ್ಳುವ ಜೊತೆ ಉತ್ತಮ ರನ್ ಗಳಿಸಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications