Ind Vs Aus 2nd Test: ವಿವಾದಾತ್ಮಕ ತೀರ್ಪಿಗೆ ಔಟಾದ ಕೊಹ್ಲಿ: ಅಂಪೈರ್‌ಗಳ ವಿರುದ್ಧ ಅಭಿಮಾನಿಗಳ ಆಕ್ರೋಶ

ಬಾರ್ಡರ್ ಗವಾಸ್ಕರ್ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಔಟಾಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಔಟ್ ನೀಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಂಪೈರ್‌ಗಳ ವಿರುದ್ಧ ಅಭಿಮಾನಿಗಳು ಕಿಡಿ ಕಾರಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಕೊಹ್ಲಿ ಅರ್ಧಶತಕದತ್ತ ಮುನ್ನಡೆಯುತ್ತಿದ್ದರು.
ಆದರೆ ಮ್ಯಾಥ್ಯೂ ಕುಹ್ನೆಮನ್ ಬೌಲಿಂಗ್‌ನಲ್ಲಿ ಚೆಂಡ್ ವಿರಾಟ್ ಕೊಹ್ಲಿ ಬ್ಯಾಟ್ ಮತ್ತು ಪ್ಯಾಡ್‌ಗೆ ಬಡಿದಾಗ ಎಲ್‌ಬಿಡಬ್ಲ್ಯೂ ಔಟ್‌ಗೆ ಮನವಿ ಮಾಡಿದರು. ಆನ್ ಫೀಲ್ಡ್ ಅಂಪೈರ್ ನಿತಿನ್ ಮೆನನ್ ತಕ್ಷಣ ಔಟ್ ನೀಡಿದರು. ಆದರೆ, ಕೊಹ್ಲಿ ಮೂರನೇ ಅಂಪೈರ್ ಗೆ ಪರಿಶೀಲನೆಗೆ ಮನವಿ ಮಾಡಿದರು.
ಚೆಂಡು ಬ್ಯಾಟ್ ಮತ್ತು ಪ್ಯಾಡ್‌ಗೆ ತಾಗಿದ್ದು ಅಲ್ಟ್ರಾ ಎಡ್ಜ್ ಪರೀಕ್ಷೆಯಲ್ಲಿ ಸ್ಪಷ್ಟವಾಗಿ ಕಂಡಿತು. ಆದರೆ, ಮೂರನೇ ಅಂಪೈರ್ ಆನ್‌ಫೀಲ್ಡ್ ಅಂಪೈರ್ ನಿರ್ಣಯದ ಪರವಾಗಿ ತೀರ್ಪು ಕೊಟ್ಟರು. ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಅಂಪೈರ್ ಮಾಡಿದ ಎಡವಟ್ಟಿನ ಬಗ್ಗೆ ಕೋಪಗೊಂಡರು.

ಬೇಸರಗೊಂಡ ವಿರಾಟ್ ಕೊಹ್ಲಿ
ಔಟಾದ ನಂತರ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ ವಿರಾಟ್ ಕೊಹ್ಲಿ ಅಲ್ಲಿ ರೀಪ್ಲೇ ನೋಡಿ ಬೇಸರಪಟ್ಟುಕೊಂಡರು. ರೀಪ್ಲೇ ನೋಡುತ್ತಿದ್ದಂತೆ ಕೊಹ್ಲಿ ತಮ್ಮ ನಿರಾಸೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು. ಕೊಹ್ಲಿ ಈ ಮೊದಲು ಕೂಡ ಇದೇ ರೀತಿಯ ವಿವಾದಾತ್ಮಕ ತೀರ್ಪಿಗೆ ಔಟಾಗಿದ್ದರು. ಆಗಲೂ ಕೂಡ ನಿತಿನ್ ಮೆನನ್ ಆನ್‌ಫೀಲ್ಡ್ ಅಂಪೈರ್ ಆಗಿದ್ದರು.
ನಿಯಮಗಳ ಪ್ರಕಾರ ಚೆಂಡು ಬ್ಯಾಟ್ ಮತ್ತು ಪ್ಯಾಡ್‌ಗೆ ತಾಗಿದಾಗ ಅದನ್ನು ಬ್ಯಾಟ್‌ಗೆ ತಾಗಿದ್ದು ಎಂದೇ ಪರಿಗಣಿಸಬೇಕು ಮತ್ತು ಅದು ನಾಟೌಟ್ ಎಂದು ಪರಿಗಣಿಸಬೇಕು. ಆನ್‌ಫೀಲ್ಡ್ ಅಂಪೈರ್ ಬ್ಯಾಟರ್ ಗೆ ವಿರುದ್ಧ ನಿರ್ಣಯ ನೀಡಿದಾಗ ಅದರ ಆಧಾರದ ಮೇಲೆ ಮೂರನೇ ಅಂಪೈರ್ ತೀರ್ಮಾನ ಮಾಡುತ್ತಾರೆ.
ಅಭಿಮಾನಿಗಳ ಕೋಪ
ಔಟ್ ಎಂದು ನಿರ್ಣಯ ನೀಡಿದ ಅಂಪೈರ್ ನಿತಿನ್ ಮೆನನ್ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ. ನಿತಿನ್ ಮೆನನ್ ಪ್ರತಿ ಬಾರಿ ಕೊಹ್ಲಿ ವಿಚಾರದಲ್ಲಿ ತಪ್ಪು ನಿರ್ಣಯ ನೀಡಿದ್ದಾರೆ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಕೆಲವು ಅಭಿಮಾನಿಗಳು ಎಂಸಿಸಿ ನಿಯಮಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಚೆಂಡು ಬ್ಯಾಟ್ ಮತ್ತು ಪ್ಯಾಡ್‌ಗೆ ಒಂದೇ ಬಾರಿ ತಾಗಿದಾಗ ಅದನ್ನು ನಾಟೌಟ್ ಎಂದು ಪರಿಗಣಿಸಬೇಕು ಎನ್ನುವ ನಿಯಮವಿದೆ ಎಂದು ತೋರಿಸಿದ್ದಾರೆ.
ವಿವಾದಾತ್ಮಕ ತೀರ್ಪಿನ ನಡುವೆಯೂ ಭಾರತ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅದ್ಭುತ ಬ್ಯಾಟಿಂಗ್ ನೆರವಿನಿಂದ 262 ರನ್‌ಗಳಿಗೆ ಆಲೌಟ್ ಆಗುವ ಮೂಲಕ 1 ರನ್‌ಗಳ ಹಿನ್ನಡೆ ಪಡೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications