ಭಾರತೀಯರ ಪಾಲಿಗೆ ದೊಡ್ಡ ಹಬ್ಬವೆಂದೇ ಕರಿಸಿಕೊಳ್ಳುವ ದೀಪಾವಳಿ ಈಗ ತಾನೇ ಮುಗಿದಿದೆ. ಆದರೆ. ಭಾರತದ ಜನರ ದೀಪಾವಳಿ ಮೂಡ್ ಇನ್ನೂ ಹಾಗೆ ಇದೆ. ಈ ಮೂಡ್ ಇದೇ ಭಾನುವಾರ ನಡೆಯುವ ವಿಶ್ವಕಪ್ ಫೈನಲ್‌ನಲ್ಲಿ ದ್ವಿಗುಣಗಳಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ದೇಶವಾಸಿಗಳು ಮನೆಯಲ್ಲಿ ದೀಪಾವಳಿ ಆಚರಿಸಿ ಆಗಿದೆ. ಇದೇ ಭಾನುವಾರದಂದು ಮತ್ತೊಮ್ಮೆ ಎಲ್ಲರೂ ಕೂಡಿ ದೀಪವಾಳಿ ಆಚರಣೆಗೆ ಮೆರಗು ತುಂಬಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅತ್ತ ವಿಶ್ವಕಪ್ ಫೈನಲ್ ನಡೆಯಲಿರುವ ಅಹಮದಾಬಾದ್ ಸಿಟಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಭಾನುವಾರ, ನವೆಂಬರ್ 19ರಂದು 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

ಈಗಾಗಲೇ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಅಹಮದಾಬಾದ್ ತಲುಪಿದೆ. ಈ ಪಂದ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಜಿನಿಕಾಂತ್, ಅಮಿತಾಭ್ ಬಚ್ಚನ್, ಎಂಎಸ್ ಧೋನಿ, ಕಪಿಲ್ ದೇವ್ ಸೇರಿದಂತೆ ಅನೇಕ ಗಣ್ಯರು ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ತಲುಪಲಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಕ್ರೀಡಾಂಗಣವನ್ನು ಸಾಕಷ್ಟು ಅಲಂಕರಿಸಲಾಗಿದೆ. ಇದರಲ್ಲಿ ಹಲವು ಬಗೆಯ ದೀಪಗಳನ್ನು ಅಳವಡಿಸಲಾಗಿದೆ. ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದರೆ, ದೀಪಾವಳಿ ಹಬ್ಬ ಇನ್ನೂ ನರೇಂದ್ರ ಮೋದಿ ತವರಿನಲ್ಲಿ ನಡೆಯುತ್ತಲೇ ಇದೆ ಎಂದನಿಸುತ್ತದೆ.
ಭಾರತೀಯ ವಾಯು ಪಡೆಯ (ಐಎಎಫ್) ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಏರ್ ಶೋ ನಡೆಸಲಿದೆ. ಹೀಗಾಗಿ ಶುಕ್ರವಾರದಂದು ಪೂರ್ವಾಭ್ಯಾಸ ನಡೆಸಿದವು.

ಲೋಹದ ಹಕ್ಕಿಗಳು ಅಹಮದಾಬಾದ್‌ನ ಆಕಾಶವನ್ನು ಬೆಳಗಿಸುತ್ತವೆ. ಇದು ನೆರೆಯುವ ಲಕ್ಷಾಂತರ ಪ್ರೇಕ್ಷಕರ ಕಣ್ಣಿಗೆ ಅದ್ಭುತ ಅನುಭವವನ್ನು ನೀಡಲಿದೆ.
ಇನ್ನು ನರೇಂದ್ರ ಮೋದಿ ಕ್ರೀಡಾಂಗಣದ ಮನಮೋಹಕ ನೋಟ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ರೀಡಾಂಗಣದಲ್ಲಿ ಹಲವು ಕಲರ್‌ಫುಲ್ ಲೈಟ್‌ಗಳನ್ನು ಅಳವಡಿಸಲಾಗಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರೊಂದಿಗೆ ಇಡೀ ಕ್ರೀಡಾಂಗಣದ ವಿವಿಧೆಡೆ ದೊಡ್ಡ ಸ್ಪೀಕರ್‌ಗಳನ್ನು ಅಳವಡಿಸಲಾಗಿದ್ದು, ಪಂದ್ಯದ ವೇಳೆ ಹಾಡು, ಸಂಗೀತ ನುಡಿಸಲಾಗುವುದು. ಇದರೊಂದಿಗೆ ಪಂದ್ಯಕ್ಕೆ ಸಂಬಂಧಿಸಿದ ಘೋಷಣೆಗಳು ಮತ್ತು ಕಾಮೆಂಟರಿ ಕೂಡ ಮಾಡಲಾಗುವುದು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸುಮಾರು 1 ಲಕ್ಷದ 32 ಸಾವಿರ ಜನರು ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಬಹುದು. ಪಂದ್ಯದ ವೇಳೆ ಈ ಕ್ರೀಡಾಂಗಣವು ಕಿಕ್ಕಿರಿದು ತುಂಬಿರುತ್ತದೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕ್ರೀಡಾಂಗಣದ ಎಲ್ಲೆಡೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣಕ್ಕೆ ಹೋಗುವ ಪ್ರೇಕ್ಷಕರನ್ನೂ ತಪಾಸಣೆ ನಡೆಸಲಾಗುತ್ತದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ 70 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿತು. ನಂತರ, ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.
ಇದೀಗ, 2003ರ ವಿಶ್ವಕಪ್ ನಂತರ, ಮತ್ತೊಮ್ಮೆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪೈಪೋಟಿ ನಡೆಸಲಿವೆ. ಭಾರತ ಸೇಡು ತೀರಿಸಿಕೊಳ್ಳುತ್ತಾ ಅಥವಾ ಆಸ್ಟ್ರೇಲಿಯಾ ತನ್ನ ಪ್ರಾಬಲ್ಯ ಮುಂದುವರೆಸುತ್ತಾ ಕಾದು ನೋಡಬೇಕಿದೆ.