ಮಂಗಳವಾರ, ನವೆಂಬರ್ 28ರಂದು ಗುವಾಹಟಿಯ ಬರ್ಸಾಪರಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಆತಿಥೇಯ ಭಾರತ ವಿರುದ್ಧ ಕೊನೆಯ ಎಸೆತದ ರೋಚಕ ಗೆಲುವು ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು.
ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿನ ರೂವಾರಿಯಾದರು ಮತ್ತು ಮೂರು ಪಂದ್ಯಗಳ ನಂತರ ಸರಣಿಯ ಹಿನ್ನಡೆಯನ್ನು 2-1 ಅಂತರಕ್ಕೆ ತಗ್ಗಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರುತುರಾಜ್ ಗಾಯಕ್ವಾಡ್ ಅವರ ಸ್ಫೋಟಕ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್‌ಗಳನ್ನು ಕಲೆಹಾಕಿತು.
223 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಮೋಘ ಶತಕದ ಸಹಾಯದಿಂದ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಕೊನೆಯ ಓವರ್‌ನಲ್ಲಿ 21 ರನ್‌ಗಳು ಬೇಕಿದ್ದಾಗ, ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮ್ಯಾಥ್ಯೂ ವೇಡ್ ಜೋಡಿ ಬೌಂಡರಿ-ಸಿಕ್ಸರ್ ಮೂಲಕ ಪಂದ್ಯ ಗೆಲ್ಲಿಸಿದರು.
222 ರನ್‌ಗಳ ದೊಡ್ಡ ಕಲೆಹಾಕಿಯೂ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್‌ನಿಂದಾಗಿ ಭಾರತ ತಂಡ ಸೋಲು ಕಂಡಿತು ಮತ್ತು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳುವ ಆಸೆಗೆ ತಣ್ಣೀರೆರಚಿತು.
ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ಮತ್ತು ಆರನ್ ಹಾರ್ಡಿ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 47 ರನ್‌ಗಳ ಜೊತೆಯಾಟ ನಿರ್ಮಿಸಿತು. ಈ ವೇಳೆ 16 ರನ್ ಗಳಿಸಿ ಆಡುತ್ತಿದ್ದ ಆರನ್ ಹಾರ್ಡಿ ಔಟಾದರು.

ನಂತರ ಬಂದ ಜೋಶ್ ಇಂಗ್ಲಿಸ್ ಜಾಸ್ತಿ ಹೊತ್ತು ನಿಲ್ಲದೆ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇದೇ ವೇಳೆ ಆರಂಭಿಕ ಟ್ರಾವಿಸ್ ಹೆಡ್ ಕೂಡ 18 ಎಸೆತಗಳಲ್ಲಿ 8 ಬೌಂಡರಿ ಮೂಲಕ 38 ರನ್ ಗಳಿಸಿದ್ದಾಗ ಔಟಾಗಿ ಹೊರನಡೆದರು.
ಈ ವೇಳೆ ಜೊತೆಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಕುಸಿದಿದ್ದ ತಂಡಕ್ಕೆ ಆಸರೆಯಾದರು. 4ನೇ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದರು. 17 ರನ್ ಗಳಿಸಿ ಆಡುತ್ತಿದ್ದ ಮಾರ್ಕಸ್ ಸ್ಟೋಯಿನಿಸ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಸೋಲಿನತ್ತ ಮುಖ ಮಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ದಿಕ್ಕು ತೋರಿಸಿದ್ದು, ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್. ಕೇವಲ 48 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಮೇತ ಅಜೇಯ 104 ರನ್ ಬಾರಿಸಿದರೆ, ಮ್ಯಾಕ್ಸ್‌ವೆಲ್‌ಗೆ ಉತ್ತಮ ಸಾಥ್ ನೀಡಿದ ನಾಯಕ ಮ್ಯಾಥ್ಯೂ ವೇಡ್ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 28 ರನ್ ಗಳಿಸಿದರು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ರವಿ ಬಿಷ್ಣೋಯಿ 2 ವಿಕೆಟ್ ಕಬಳಿಸಿದರೆ, ಅರ್ಶ್‌ದೀಪ್ ಸಿಂಗ್, ಅವೇಶ್ ಖಾನ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು. 4 ಓವರ್‌ಗಳಲ್ಲಿ 68 ರನ್ ಬಿಟ್ಟುಕೊಟ್ಟ ಪ್ರಸಿದ್ಧ್ ಕೃಷ್ಣ ದುಬಾರಿಯಾದರು.

ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಲಾಗಲಿಲ್ಲ. ತಂಡದ ಮೊತ್ತ 14 ರನ್‌ಗಳಾಗಿದ್ದಾಗ ವೈಯಕ್ತಿಕ 6 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಇಶಾನ್ ಕಿಶನ್ ಕೂಡ ಜಾಸ್ತಿ ಹೊತ್ತು ನಿಲ್ಲದೆ ಖಾತೆ ತೆರೆಯುವ ಮುನ್ನವೇ ಔಟಾದರು.
ಭಾರತ 2.3 ಓವರ್‌ಗಳಲ್ಲಿ 24 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬಂದ ನಾಯಕ ಸೂರ್ಯಕುಮಾರ್ ಯಾದವ್ ಅವರು ಆರಂಭಿಕ ರುತುರಾಜ್ ಜೊತೆಗೂಡಿ ಮೂರನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ನಿರ್ಮಿಸಿ ಆರಂಭಿಕ ಹಿನ್ನಡೆಯಿಂದ ಪಾರು ಮಾಡಿದರು.
ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ತಿಲಕ್ ವರ್ಮಾ 24 ಎಸೆತಗಳಲ್ಲಿ 4 ಬೌಂಡರಿ ಮೂಲಕ ಅಜೇಯ 31 ರನ್ ಗಳಿಸಿದರು.
ಇನ್ನು ಆರಂಭಿಕ ರುತುರಾಜ್ ಗಾಯಕ್ವಾಡ್ ಕೊನೆಯವರೆಗೂ ಅಬ್ಬರದ ಬ್ಯಾಟಿಂಗ್ ಮಾಡಿದರು ಮತ್ತು ಕೇವಲ 57 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 123 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಜೇಸನ್ ಬೆಹ್ರೆಂಡಾರ್ಫ್ ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು ದುಬಾರಿಯಾದರು. ಕೇನ್ ರಿಚರ್ಡ್ಸನ್, ಜೇಸನ್ ಬೆಹ್ರೆಂಡಾರ್ಫ್ ಮತ್ತು ಆರನ್ ಹಾರ್ಡಿ ತಲಾ ಒಂದೊಂದು ವಿಕೆಟ್ ಪಡೆದರು.