
ಆಸ್ಟ್ರೇಲಿಯಾ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಮುನ್ನವೇ ಭಾರತಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸಿದರೆ ಐಸಿಸಿ ಏಕದಿನ ನಂಬರ್ 1 ತಂಡದ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.
ಸದ್ಯ ಭಾರತ ತಂಡ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟಿದೆ. ವಿಶಾಖಪಟ್ಟಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಬಳಿಕ ನಂಬರ್ 1 ಸ್ಥಾನಕ್ಕೆ ಮತ್ತಷ್ಟು ಸನಿಹವಾಗಿದೆ.
ಚೆನ್ನೈನಲ್ಲಿ ಮಾರ್ಚ್ 22ರಂದು ನಡೆಯಲಿರುವ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಏನಾದರೂ ಸೋತರೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಇಳಿಯಲಿದೆ. ಆಸ್ಟ್ರೇಲಿಯಾ ನಂಬರ್ 1 ಏಕದಿನ ತಂಡ ಎನಿಸಿಕೊಳ್ಳಲಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಗೆದ್ದ ಬಳಿಕ ಭಾರತ ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿತ್ತು.

ಎರಡನೇ ಸ್ಥಾನದಲ್ಲಿದೆ ಆಸ್ಟ್ರೇಲಿಯಾ
ಭಾರತ ಸದ್ಯ ಐಸಿಸಿ ಏಕದಿನ ರ್‍ಯಾಂಕಿಂಗ್ ಪಟ್ಟಿಯಲ್ಲಿ 114 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. 112 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಸೋತರೆ ಎರಡೂ ತಂಡಗಳು 113 ಅಂಕಗಳನ್ನು ಹೊಂದಲಿವೆ. ಆಸ್ಟ್ರೇಲಿಯಾ ಭಾರತ ಜಂಟಿಯಾಗಿ ಅಗ್ರಸ್ಥಾನಿಗಳಾಗಬೇಕಾಗುತ್ತದೆ.
ಒಂದು ವೇಳೆ ಭಾರತ ಗೆಲುವು ಸಾಧಿಸಿದರೆ, ಸರಣಿಯನ್ನು ವಶಪಡಿಸಿಕೊಳ್ಳುವ ಜೊತೆ 115 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆಯಲಿದೆ. ಭಾರತ ಸದ್ಯ ಟಿ20 ಮತ್ತು ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರೆ, ಟೆಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿದೆ, ಆಸ್ಟ್ರೇಲಿಯಾ ಮತ್ತೆ ಅಗ್ರಸ್ಥಾನಕ್ಕೇರಿದೆ.

ಸರಣಿ ಗೆಲ್ಲುವ ವಿಶ್ವಾಸದಲ್ಲಿ ಭಾರತ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತ್ತು. ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿನ್ನು 1-1ರಲ್ಲಿ ಸಮಬಲಗೊಳಿಸಿದೆ.
ಮೂರನೇ ಏಕದಿನ ಪಂದ್ಯ ಈಗ ಸರಣಿ ನಿರ್ಣಾಯಕವಾಗಿದೆ. ಎರಡೂ ತಂಡಗಳು ಸರಣಿ ಗೆಲ್ಲುವ ಕಾತರದಲ್ಲಿವೆ. ಭಾರತ ತವರಿನಲ್ಲಿ ಸತತವಾಗಿ ಏಳು ಏಕದಿನ ಸರಣಿಗಳನ್ನು ಗೆದ್ದಿದ್ದು, ಅದನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದರೆ, ಏಕದಿನ ಸರಣಿ ಗೆದ್ದು ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಆಸ್ಟ್ರೇಲಿಯಾ ಪಡೆ.
ಮೊದಲ ಪಂದ್ಯದಲ್ಲಿ ಭಾರತ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತ್ತು, ಆದರೆ ಎರಡನೇ ಪಂದ್ಯದಲ್ಲಿ ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ಪಡೆ ಸಂಪೂರ್ಣವಾಗಿ ವಿಫಲವಾಯಿತು. ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕಾದರೆ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಾಗುತ್ತದೆ.
ಮಾರ್ಚ್ 22ರಂದು ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈಗಾಗಲೇ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು, ತುಂಬಿದ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಸೂರ್ಯಕುಮಾರ್ ಯಾದವ್ ಎರಡು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿರುವುದು ಭಾರತಕ್ಕೆ ತಲೆನೋವಾಗಿದೆ. ಶಾರ್ದುಲ್ ಠಾಕೂರ್ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.