IND vs AUS: ಸಿಡ್ನಿ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾಗೆ ಸಿಹಿ ಸುದ್ದಿ; ಸ್ಟಾರ್ಕ್ ಹೊರಗೆ?
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 184 ರನ್‌ಗಳ ಸೋಲು ಅನುಭವಿಸಬೇಕಾಯಿತು. ಇದರೊಂದಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದ ನಂತರ, ಟೀಮ್ ಇಂಡಿಯಾ ಇದೀಗ ಕೊನೆಯ ಮತ್ತು ಐದನೇ ಟೆಸ್ಟ್ ಪಂದ್ಯವನ್ನು ಆಡಲು ಸಿಡ್ನಿ ತಲುಪಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.
ವರದಿಗಳ ಪ್ರಕಾರ, ಆಸ್ಟ್ರೇಲಿಯಾ ತಂಡದ ಅಪಾಯಕಾರಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದು. ಒಂದು ವೇಳೆ ಸಿಡ್ನಿ ಟೆಸ್ಟ್ ಪಂದ್ಯದಿಂದ ಸ್ಟಾರ್ಕ್ ಹೊರ ಬಿದ್ದರೆ, ಟೀಮ್ ಇಂಡಿಯಾ ನೆಮ್ಮದಿಯ ನಿಟ್ಟುಸಿರು ಬಿಡಲಿದೆ. ಸ್ಟಾರ್ಕ್ ತಮ್ಮ ವೇಗದ ಬೌಲಿಂಗ್ ಮೂಲಕ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಸಾಕಷ್ಟು ಕಾಟ ನೀಡಿದ್ದಾರೆ.

ಹೊರಗುಳಿಯಲು ಕಾರಣವೇನು?
ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಐದನೇ ದಿನದಂದು ಮಿಚೆಲ್ ಸ್ಟಾರ್ಕ್ ಗಾಯಗೊಂಡಿದ್ದಾರೆ. ಅವರು ಗಾಯಗೊಂಡ ನಂತರ ಕೆಲವು ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಆದರೆ ಆ ಸಮಯದಲ್ಲಿ ಅವರು ಸಂಪೂರ್ಣವಾಗಿ ಗಾಯದಿಂದ ಚೇತರಿಸಿಕೊಂಡಿರಲಿಲ್ಲ. ಇದೀಗ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಿಚೆಲ್ ಸ್ಟಾರ್ಕ್ ಸಿಡ್ನಿಯಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ಕೋಚ್ ಹೇಳಿದ್ದೇನು?
ಆಸ್ಟ್ರೇಲಿಯಾ ತಂಡದ ಹೆಡ್ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು ಮಿಚೆಲ್ ಸ್ಟಾರ್ಕ್ ಅವರ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ, 'ಅವರಿಗೆ ಕೆಲವು ವಿಶೇಷ ಕಾಯಿಲೆ ಇದ್ದು, ಗಾಯದ ಜೊತೆಗೆ ಹೋರಾಡುತ್ತಿದ್ದಾರೆ. ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದರ ಕುರಿತು ಇನ್ನೂ ಏನನ್ನೂ ಹೇಳಲಾಗುವುದಿಲ್ಲ. ಒಂದು ವೇಳೆ ಸ್ಟಾರ್ಕ್ ಅವರ ಗಾಯ ಗಂಭೀರವಾಗಿದ್ದರೆ ಅವರು ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯಬೇಕಾಗಬಹುದು ಎಂದಿದ್ದಾರೆ. ಈ ಟೆಸ್ಟ್ ಸರಣಿಯ 4 ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ ಸ್ಟಾರ್ಕ್ ಒಟ್ಟು 15 ವಿಕೆಟ್ ಪಡೆದಿದ್ದಾರೆ.
ಟ್ರೋಫಿ ಉಳಿಸಿಕೊಳ್ಳತ್ತಾ ಭಾರತ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯ ಜನವರಿ 3 ರಿಂದ ಜನವರಿ 7 ರವರೆಗೆ ಸಿಡ್ನಿಯ ಸಿಡ್ನಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕೂಡ ಭಾರತೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸಮಬಲದಲ್ಲಿ ಸರಣಿಯನ್ನು ಡ್ರಾ ಮಾಡಿಕೊಳ್ಳಬಹುದು. ಇದರೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪುವ ಭರವಸೆಯನ್ನು ಅದು ಜೀವಂತವಾಗಿರಿಸಿಕೊಳ್ಳಬಹುದು. ಜೊತೆಗೆ ಭಾರತ ಟ್ರೋಫಿಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಆಸೀಸ್ 10 ವರ್ಷಗಳ ಬಳಿಕ ಭಾರತ ವಿರುದ್ಧ ಸರಣಿ ಗೆಲ್ಲುವ ಭರವಸೆಯನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications