Ind vs Aus: ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಏಕದಿನ ಗೆದ್ದು ಬೀಗಲು ಕಾರಣವಾಗಿದ್ದು ಈ 4 ಅಂಶಗಳು!

ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿದ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿಯೂ ಅದ್ಭುತ ಪ್ರದರ್ಶನದ ಮೂಲಕ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತೀವ್ರ ಪೈಪೊಟಿ ನಡೆಸಿದ ಟೀಮ್ ಇಂಡಿಯಾ 5 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಬಳಿಕ ಬೌಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಅಲ್ಪ ಮೊತ್ತದ ಗುರಿಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಕೂಡ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ಮುಗ್ಗರಿಸಿತು. ಆದರೆ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಜೋಡಿಯ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಈ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ ಟೀಮ್ ಇಂಡಿಯಾ.

ಶಮಿ- ಸಿರಾಜ್ ಜೊಡಿಯ ಮಾರಕ ಬೌಲಿಂಗ್ ದಾಳಿ
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭದಿಂದಲೇ ಮೇಳುಗೈ ಪಡೆಯುವಲ್ಲಿ ಯಶಸ್ವಿಯಾಯಿತು. ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿರುವ ವಾಂಖೆಡೆ ಪಿಚ್ ಈ ಪಂದ್ಯದಲ್ಲಿ ಬೌಲರ್‌ಗಳಿಗೆ ಅದ್ಭುತವಾಗಿ ನೆರವು ನೀಡಿತ್ತು. ಈ ಪಿಚ್‌ನಲ್ಲಿ ಟೀಮ್ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಶಮಿ 6 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 3 ವಿಕೆಟ್ ಪಡೆದರೆ ಸಿರಾಜ್ 5.4 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಸಂಪಾದಿಸಿದರು. ಈ ಜೋಡಿ ಆಸ್ಟ್ರೇಲಿಯಾ ತಂಡ 188 ರನ್‌ಗಳಿಗೆ ಆಲೌಟ್ ಆಗಲು ದೊಡ್ಡ ಕಾರಣವಾಯಿತು.

ಕೆಎಲ್ ರಾಹುಲ್ ಬ್ಯಾಟಿಂಗ್
ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಕಾರಣವಾದ ಮತ್ತೊಂದು ದೊಡ್ಡ ಕಾರಣವೆಂದರೆ ಅದು ಕೆಎಲ್ ರಾಹುಲ್ ಅವರ ಬ್ಯಾಟಿಂಗ್. 16 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಇಳಿದ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಮಿಂಚಿದರು. ಅದರಲ್ಲೂ ವೈಯಕ್ತಿಯ ಪ್ರದರ್ಶನಗಳಿಂದಾಗಿ ಸಾಕಷ್ಟು ಒತ್ತಡಗಳ ಮಧ್ಯೆಯೂ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದ ಕೆಎಲ್ ರಾಹುಲ್ ಅಜೇಯ 75 ರನ್‌ಗಳಿಸಿದ್ದಾರೆ. ಈ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಾನು ಭಾರತಕ್ಕೆ ಪ್ರಮುಖ ಅಸ್ತ್ರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ರಾಹುಲ್- ಜಡೇಜಾ ನಿರ್ಣಾಯಕ ಜೊತೆಯಾಟ
ಇನ್ನು ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣವಾದ ಮತ್ತೊಂದ ಪ್ರಮುಖ ಅಂಶವೆಂದರೆ 7ನೇ ವಿಕೆಟ್‌ಗೆ ಬಂದ ನಿರ್ಣಾಯಕ ಜೊತೆಯಾಟ. ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಮೊತ್ತ 83 ರನ್‌ಗಳಿದ್ದಾಗ ಕ್ರೀಸ್‌ಗಿಳಿದ ರವೀಂದ್ರ ಜಡೇಜಾ ಕೆಎಲ್ ರಾಹುಲ್ ಜೊತೆಗೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಅಜೇಯ ಜೊತೆಯಾಟವಾಡಿದ ಈ ಜೋಡಿ 108 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಹೀಗಾಗಿ ಇನ್ನೂ 61 ಎಸೆತಗಳು ಭಾಕಿಯಿರುವಂತೆಯೇ ಟೀಮ್ ಇಂಡಿಯಾ ಈ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ವಶಕ್ಕೆ ಪಡೆಯಿತು.

ಹಾರ್ದಿಕ್ ಪಾಂಡ್ಯ ನಾಯಕತ್ವ
ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹಾರ್ದಿಕ್ ಪಾಂಡ್ಯಾ ಹೆಗಲಿಗೇರಿತ್ತು. ಈ ಜವಾಬ್ಧಾರಿಯನ್ನು ಹಾರ್ದಿಕ್ ಅದ್ಭುತವಾಗಿ ನಿರ್ವಹಿಸಿದರು. ಅದರಲ್ಲೂ ಟೀಮ್ ಇಂಡಿಯಾದ ಬೌಲಿಂಗ್ ಸಂದರ್ಭದಲ್ಲಿ ಬೌಲರ್‌ಗಳ ನಿರ್ವಹಣೆಯನ್ನು ಅದ್ಭುತವಾಗಿ ನಿರ್ವಹಿಸಿ ಗಮನಸೆಳೆದಿದ್ದಾರೆ ಹಾರ್ದಿಕ್ ಪಾಂಡ್ಯ. ಈ ಮೂಲಕ ಆಸ್ಟ್ರೇಲಿಯಾ ತಂಡ ಯಾವ ಹಂತದಲ್ಲಿಯೂ ತಿರುಗಿಬೀಳಲು ಸಾಧ್ಯವಾಗದಂತೆ ಮಾಡಿದರು. ಇದು ಕೂಡ ಟೀಮ್ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications