
ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿತ್ತಿದೆ. ಮುಂಬೈನ ವಾಂಕೆಡೆ ಕ್ರೀಡಾಮಗಣದಲ್ಲಿ ಮೊದಲ ಪಂದ್ಯ ನಡೆಯುವ ಮೂಲಕ ಮೂರು ಪಂದ್ಯಗಳ ಈ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಎಲ್ಲಾ ಮಾದರಿಯಲ್ಲಿಯೂ ಫಾರ್ಮ್‌ಗೆ ಮರಳಿರುವ ವಿರಾಟ್ ಏಕದಿನ ಸರಣಿಯಲ್ಲಿ ಕನಿಷ್ಠ ಒಂದು ಶತಕ ಬಾರಿಸಲಿದ್ದಾರೆ ಎಂದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವೈಟ್‌ಬಾಲ್‌ನಲ್ಲಿ ಫಾರ್ಮ್ ಕಂಡುಕೊಂಡ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಬೃಹತ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಮೂರು ಮಾದರಿಯಲ್ಲಿಯೂ ವಿರಾಟ್ ಕೊಹ್ಲಿ ಹಳೆಯ ಲಯವನ್ನು ಕಂಡುಕೊಂಡಂತಾಗಿದೆ. ಹೀಗಾಗಿ ಕೊಹ್ಲಿ ಬ್ಯಾಟ್‌ನಿಂದ ಇನ್ನಷ್ಟು ರನ್‌ಗಳು ಹರಿದು ಬರುವ ನಿರೀಕ್ಷೆಗಳಿದೆ.
ಮಾಝಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಇದೇ ನಿರೀಕ್ಷೆಯನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಸಾಕಷ್ಟು ರನ್ ಹರಿದುಬರಲಿದೆ ಎಂದಿರುವ ಜಾಫರ್ ಮೂರು ಪಂದ್ಯಗಳಲ್ಲಿ ಕನಿಷ್ಠ ಒಂದಾದರೂ ಶತಕವನ್ನು ಕೊಹ್ಲಿ ಸಿಡಿಸಲಿದ್ದಾರೆ ಎಂದಿದ್ದಾರೆ.
"ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಪ್ರತಿಸ್ಪರ್ಧೆಯಿಲ್ಲ ಎಂಬುದನ್ನು ನಾನು ಹೇಳಬಲ್ಲೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಕನಿಷ್ಠ ಒಂದು ಶತಕವನ್ನು ಸಿಡಿಸುವ ನಿರೀಕ್ಷೆಹೊಂದಿದ್ದೇನೆ. ನಾನು ನಿರೀಕ್ಷಿಸುವುದು ಕನಿಷ್ಠ ಒಂದು ಶತಕವನ್ನು ಆದರೆ ಅವರು ಎರಡು ಶತಕಗಳನ್ನು ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಅವರು ಆಸ್ಟ್ರೇಲಿಯಾ ವಿರುದ್ಧ ಆಡುವುದನ್ನು ಇಷ್ಟ ಪಡುತ್ತಾರೆ. ಇನ್ನು ಅವರು ಫಾರ್ಮ್‌ನಲ್ಲಿದ್ದಾಗ ಅದನ್ನು ಅವರು ಸುದೀರ್ಘ ಕಾಲ ಕಾಪಾಡಿಕೊಳ್ಳುತ್ತಾರೆ. ಹಾಗಾಗಿ ಅವರ ಶತಕಕ್ಕಾಗಿ ನಾನು ಎದುರುನೋಡುತ್ತಿದ್ದೇನೆ" ಎಂದಿದ್ದಾರೆ ವಾಸಿಂ ಜಾಫರ್.
ಮುಂದುವರಿದು ಮಾತನಾಡಿದ ವಾಸಿಂ ಜಾಫರ್, "ಈ ಆವೃತ್ತಿಯನ್ನು ಭಾರತ ಅತ್ಯುತ್ತಮವಾಗಿ ಅಂತ್ಯಗೊಳಿಸಲು ಬಯಸುತ್ತದೆ ಯಾಕೆಂದರೆ ಈ ಸರಣಿಯ ಬಳಿಕ ಐಪಿಎಲ್ ಆರಂಭವಾಗಲಿದ್ದು ಎಲ್ಲಾ ಆಟಗಾರರು ಕೂಡ ಭಿನ್ನವಾದ ಫ್ರಾಂಚೈಸಿಗಳ ಪರವಾಗಿ ಆಡಲಿದ್ದಾರೆ. ಎಲ್ಲಾ ಆಟಗಾರರಿಗೆ ಒಟ್ಟಾಗಿ ಆಡಲು ಇದು ಈ ಋತುವಿನ ಕೊನೆಯ ಅವಕಾಶವಾಗಿದೆ. ಅಲ್ಲದೆ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಭಾರತಕ್ಕೆ ಕರೆಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ.ಹಾಗಾಗಿ ಈ ಋತು ಮುಕ್ತಾಯಕ್ಕೂ ಮುನ್ನ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ" ಎಂದಿದ್ದಾರೆ ವಾಸಿಂ ಜಾಫರ್.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದಕ್ಕೂ ಮುನ್ನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದು ಆ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಸತತ ನಾಲ್ಕನೇ ಬಾರಿ ತನ್ನಲ್ಲೇ ಉಳಿಸಿಕೊಂಡಿದೆ.
ಇನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ರೋಹಿತ್ ಶರ್ಮಾ ಕೌಟುಂಬಿಕ ಕಾರಣದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದು ಅಂತಿಮ ಎರಡು ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ. ಇನ್ನು ರವೀಂದ್ರ ಜಡೇಜಾ ಈ ಸರಣಿಯ ಮೂಲಕ ಸುದೀರ್ಘ ಕಾಲದ ಬಳಿಕ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.