ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ ಆಯೋಜನೆಯಾಗಲಿದೆ. ಟೀಮ್ ಇಂಡಿಯಾದ ನಾಲ್ವರು ಪ್ರಮುಖ ಆಟಗಾರರು ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿದಿರುವ ಕಾರಣ ಆಡುವ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ದೊರೆಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದ ವಿಚಾರವಾಗಿ ಕೋಚ್ ದ್ರಾವಿಡ್ ಕೆಲ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ. ಪಂದ್ಯದ ಮುನ್ನಾದಿನ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಹುಲ್ ದ್ರಾವಿಡ್ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಮತ್ತೆ ಗಾಯದ ಕಾರಣದಿಂದಾಗಿ ಶ್ರೇಯಸ್ ಐಯ್ಯರ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಟೂರ್ನಿಯಲ್ಲಿ ಸಂಪೂರ್ಣವಾಗಿ ಅವರು ಲಭ್ಯವಾಗಿರಲಿಲ್ಲ. ಸೂಪರ್ 4 ಹಂತದಲ್ಲಿ ಒಂದು ಪಂದ್ಯದಲ್ಲಿಯೂ ಅವರು ಅವಕಾಶ ಗಿಟ್ಟಿಸಿಕೊಂಡಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಶ್ರೇಯಸ್ ಐಯ್ಯರ್ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಎನ್ನುವುದನ್ನು ಕೋಚ್ ದ್ರಾವಿಡ್ ಖಚಿತಪಡಿಸಿದ್ದಾರೆ.
ಇನ್ನು ಅನುಭವಿ ಆಟಗಾರ ಆರ್ ಅಶ್ವಿನ್ ಕೂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ದೃಢಪಟ್ಟಿದೆ. ಸ್ವತಃ ದ್ರಾವಿಡ್ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಅಶ್ವಿನ್ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆಯದಿದ್ದರೂ ಕೊನೆಯ ಹಂತದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಅವಕಾಶ ಹೊಂದಿದ್ದು ಹೀಗಾಗಿ ಈ ಸರಣಿಯಲ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಸಂಭಾವ್ಯ ಆಡುವ ಬಳಗ
ಭಾರತ: ಶುಬ್ಮನ್ ಗಿಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ಸಿ), ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ (ವಿಸಿ), ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ (WK), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ಸಿ), ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ