ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರೀ ಸುದ್ದಿಯಲ್ಲಿದ್ದಾರೆ. ಇದರಿಂದಾಗಿ ಅವರು ತಂಡದಿಂದ ಹೊರಗುಳಿಯುವ ಹಂತಕ್ಕೆ ಬಂದು ನಿಂತಿದ್ದಾರೆ. ವರದಿಗಳ ಪ್ರಕಾರ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮತ್ತು ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಪಂದ್ಯ ಜನವರಿ 3ರಿಂದ ಸಿಡ್ನಿಯಲ್ಲಿ ನಡೆಯಲಿದೆ.
ಸಿಡ್ನಿ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿರುವ ರೋಹಿತ್ ಶರ್ಮಾ ಬದಲಿಗೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಸಿಡ್ನಿ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯವಾಗಿದೆ. ಉಭಯ ತಂಡಗಳಿಗೆ ಗೆಲುವು ಮಹತ್ವದಾಗಿದೆ.

ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾದ ಕಾರಣ ಪರ್ತ್ ಟೆಸ್ಟ್‌ನಲ್ಲಿ ಆಡಲಿಲ್ಲ. ಈ ವೇಳೆ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಪಂದ್ಯವನ್ನು ಭಾರತ ತಂಡ ಗೆದ್ದು ಬೀಗಿತ್ತು. ಆದರೆ ಎರಡನೇ ಟೆಸ್ಟ್‌ನಲ್ಲಿ ರೋಹಿತ್ ಮರಳಿದ್ದರಿಂದ ಭಾರತ ತಂಡ ಸೋಲನ್ನು ಎದುರಿಸಬೇಕಾಯಿತು. ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಇದುವರೆಗೆ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದಾರೆ. ನಂತರ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದೀಗ ಸಿಡ್ನಿ ಟೆಸ್ಟ್‌ಗೂ ಮುನ್ನ ರೋಹಿತ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈ ಬಿಟ್ಟಿರುವ ಬಗ್ಗೆ ವರದಿಗಳ ತಿಳಿಸಿವೆ.
ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಗುರುವಾರ ಟೀಮ್ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಅವರು ರೋಹಿತ್ ಶರ್ಮಾ ಬದಲಿಗೆ ಪತ್ರಿಕಾಗೋಷ್ಠಿಗೆ ಬಂದಿದ್ದರು. ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಆಡುತ್ತಾರಾ? ಎಂಬ ಪ್ರಶ್ನೆಗೆ ಗಂಭೀರ್ ಸರಿಯಾಗಿ ಉತ್ತರ ನೀಡಿರಲಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್, ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಆಡುವ ಬಗ್ಗೆ ಮಾತನಾಡಿದ್ದರು. ಪಂದ್ಯದ ದಿನದಂದು ಸಿಡ್ನಿ ಪಿಚ್ ನೋಡಿ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಈಗ ವರದಿಗಳ ಪ್ರಕಾರ ಅಳೆದು ತೂಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಅವರನ್ನು ಕೈ ಬಿಡುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಮರಳಿದ ನಂತರ ರೋಹಿತ್ ಶರ್ಮಾ ಗೊಂದಲ ಸೃಷ್ಟಿಸಿದರು. ಮೊದಲು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಉತ್ತಮ ಜೊತೆಯಾಟ ಆಡಿದರು. ರೋಹಿತ್ ಶರ್ಮಾ ಆಗಮನ ನಂತರ ಈ ಜೋಡಿ ಬೇರೆಯಾಗುವ ಬಗ್ಗೆ ಚರ್ಚೆ ನಡೆದಿದ್ದವು. ಈ ವೇಳೆ ಸ್ವತಃ ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದರು. ಆದರೆ ಕಳಪೆ ಫಾರ್ಮ್‌ನಿಂದಾಗಿ ಹಿಟ್‌ಮ್ಯಾನ್ ಮೆಲ್ಬೋರ್ನ್‌ನಲ್ಲಿ ಮತ್ತೆ ಇನ್ನಿಂಗ್ಸ್ ತೆರೆಯಲು ನಿರ್ಧರಿಸಿದ್ದರು. ಆದರೆ ಇಲ್ಲಿಯೂ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದಾರೆ. ರೋಹಿತ್ ಆರಂಭಿಕರಾಗಿ ಕಣಕ್ಕಿಳಿದ ಕಾರಣದಿಂದ ಶುಭಮನ್ ಗಿಲ್ ಕೂಡ ಹೊರಗುಳಿಯಬೇಕಾಯಿತು. ಇದೀಗ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.