ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಶ್ರೇಯಸ್ ಔಟ್?: ಒಂದು ಸ್ಥಾನದ ಮೇಲೆ ಮೂವರ ಕಣ್ಣು!

ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿಯೇ ನಡೆಯಲಿರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಇನ್ನು ಒಂದು ತಿಂಗಳಿಗಿಂತಲೂ ಕಡಿಮೆ ಸಮಯವಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಪ್ರಮುಖ ಹಿನ್ನಡೆಯೊಂದು ಉಂಟಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಶ್ರೇಯಸ್ ಐಯ್ಯರ್ ಬೆನ್ನು ನೋವಿಗೆ ತುತ್ತಾಗಿದ್ದು ಕಿವಿಸ್ ವಿರುದ್ಧದ ಮೂರು ಪಣದ್ಯಗಳ ಎಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಮುಂಬರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೂ ಐಯ್ಯರ್ ಅಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾ ಈಗಾಗಲೇ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಶ್ರೇಯಸ್ ಐಯ್ಯರ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದು ಇದೀಗ ಅವರು ಅಲಭ್ಯವಾಗುವ ಸಾಧ್ಯತೆಗಳಿದೆ. ಹೀಗಾಗಿ ಶ್ರೇಯಸ್ ಐಯ್ಯರ್ ಸ್ಥಾನಕ್ಕೆ ಯಾರಿಗೆ ಅವಕಾಶ ದೊರೆಯಬಹುದು ಎಂಬುದು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯಲು ಮೂವರು ಆಟಗಾರರು ಅವಕಾಶಕ್ಕಾಗಿ ಕಾದುಕುಳಿತಿದ್ದಾರೆ. ಆ ಮೂವರು ಆಟಗಾರರು ಯಾರು? ಇಲ್ಲಿದೆ ಮಾಹಿತಿ

ಭರವಸೆಯ ಆಟಗಾರ ಹನುಮ ವಿಹಾರಿ
2020ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿಯೇ ನಡೆದಿದ್ದ ಬಾರ್ಡ್ ಗವಾಸ್ಕರ್ ಟ್ರೋಪಿ ಗೆಲ್ಲಲು ಹನುಮ ವಿಹಾರಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದರು. ಈ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಎರನೇ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ 161 ಎಸೆತಗಳಲ್ಲಿ 23 ರನ್ ಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. ಅನುಭವಿ ಆಟಗಾರ ಆರ್ ಅಶ್ವಿನ್ ಜೊತೆಗಿನ ಈ ಜೊತೆಯಾಟ ಭಾರತೀಯ ಟೆಸ್ಟ್ ಇರಿಹಾಸದ ಸ್ಮರಣೀಯ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ಪರಿಗಣಿಸಬಹುದಾಗಿದೆ. ಈ ಜೋಡಿ ಅಜೇಯ 62 ರನ್‌ಗಳ ಜೊತೆಯಾಟ ನಿಡುವ ಮೂಲಕ ಭಾರತವನ್ನು ಸೋಲಿನಿಂದ ಪಾರುಗೊಳಿಸಿತ್ತು.
ಇನ್ನು 2022ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿದ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಹನುಮ ವಿಹಾರಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ. ಕಳೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹೊರಗುಳಿದಿದ್ದ ವಿಹಾರಿ ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಸ್ಥಾನ ಪಡೆಯಲು ಕೂಡ ವಿಫಲವಾಗಿದ್ದಾರೆ. ಇದೀಗ ಶ್ರೇಯಸ್ ಐಯ್ಯರ್ಗಾಯಗೊಂಡಿರುವ ಕಾರಣ ಹನುಮ ವಿಹಾರಿಗೆ ಕಮ್‌ಬ್ಯಾಕ್ ಮಾಡಲು ಉತ್ತಮ ಅವಕಾಶವೊಂದು ದೊರೆತಂತಾಗಿದೆ.

ಯುವ ಆಟಗಾರ ಪೃಥ್ವಿ ಶಾ
ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಮುಂಬೈನ ಆಟಗಾರ ಪೃಥ್ವಿ ಶಾ ಈಗಾಗಲೇ ಭಾರತದ ಟೆಸ್ಟ್ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಶಾ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಇನ್ನು ಪೃಥ್ವಿ ಶಾ ಕಳೆದ ಎರಡ್ಮೂರು ದೇಶೀಯ ಕ್ರಿಕೆಟ್‌ನ ಆವೃತ್ತಿಯಲ್ಲಿ ರನ್ ಮಳೆಯನ್ನೇ ಹರಿಸುತ್ತಿದ್ದು ಭಾರತದ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಹಾತೊರೆಯುತ್ತಿದ್ದಾರೆ. ಶ್ರೇಯಸ್ ಐಯ್ಯರ್ ಗಾಯಗೊಂಡು ಹೊರಗುಳಿದರೆ ಮುಂಬೈನ ಈ ಯುವ ಆಟಗಾರನಿಗೂ ಕಮ್‌ಬ್ಯಾಕ್‌ಗೆ ಉತ್ತಮ ಅವಕಾಶವೆನಿಸಲಿದೆ.

ದೇಶಿಯ ಕ್ರಿಕೆಟ್‌ನಲ್ಲಿ ಆರ್ಭಟಿಸುತ್ತಿರುವ ಸರ್ಫರಾಜ್ ಖಾನ್
ಕಳೆದ ಮೂರು ರಣಜಿ ಆವೃತ್ತಿಗಳಲ್ಲಿ ಬ್ಯಾಟಿಂಗ್‌ನಲ್ಲಿ ಆರ್ಭಟಿಸುತ್ತಿರುವ ಆಟಗಾರ ಸರ್ಫರಾಜ್ ಅಮೋಘ ಫಾರ್ಮ್‌ನಲ್ಲಿದ್ದು ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2022-23ರ ರಣಜಿ ಆವೃತ್ತಿಯಲ್ಲಿಯೂ ತಮ್ಮ ಫಾರ್ಮ್ ಮುಂದುವರಿಸಿರುವ ಸರ್ಫರಾಜ್ ಈವರೆಗೆ ಆಡಿರುವ 8 ಇನ್ನಿಂಗ್ಸ್‌ಗಳಲ್ಲಿ ಬರೊಬ್ಬರಿ 556 ರನ್‌ಗಳನ್ನು ಗಳಿಸಿದ್ದಾರೆ. ಮೂರು ಶತಕ ಹಾಗೂ ಒಂದು ಅರ್ಧ ಶತಕವನ್ನು ದಾಖಲಿಸಿ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ಬಾಗಿಲು ಬಡಿಯುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಸರ್ಫರಾಜ್ ಖಾನ್‌ಗೆ ಅವಕಾಶ ದೊರೆಯದಿರುವುದಕ್ಕೆ ಕ್ರಿಕೆಟ್ ಪಂಡಿತರು ಕೂಡ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಶ್ರೇಯಸ್ ಐಯ್ಯರ್ ಅಲಭ್ಯವಾದರೆ ಈ ಆಟಗಾರನನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಲು ಉತ್ತಮ ಅವಕಾಶವಾಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications