
ಬೆನ್ನು ನೋವಿನ ಕಾರಣದಿಂದಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್, ಈಗ ದೆಹಲಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಶ್ರೇಯಸ್ ಅಯ್ಯರ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನರ್ವಸತಿಯಲ್ಲಿದ್ದಾರೆ. ಅವರನ್ನು ನೇರವಾಗಿ ಟೆಸ್ಟ್ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ. ಶುಕ್ರವಾರದಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ತಂಡದ ಜೊತೆ ಸೇರಿಕೊಳ್ಳುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಶ್ರೇಯಸ್ ಅಯ್ಯರ್ ಬೆಂಗಳೂರಿನ ಎಸ್‌ಸಿಎಎಯಲ್ಲಿ ತರಬೇತುದಾರರಾದ ಎಸ್ ರಜನಿಕಾಂತ್ ಮಾರ್ಗದರ್ಶನದಲ್ಲಿ ಪುನರ್ವಸತಿ ಕಾರ್ಯಕ್ರಮದ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಶ್ರೇಯಸ್ ಅಯ್ಯರ್ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ವಾಪಸಾಗುವ ಮುನ್ನ ಅವರು ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಕೇಳುವ ಸಾಧ್ಯತೆ ಇದೆ. ರವೀಂದ್ರ ಜಡೇಜಾಗೆ ಕೂಡ ಇದೇ ರೀತಿ ರಣಜಿ ಪಂದ್ಯದಲ್ಲಿ ಆಡುವಂತೆ ಕೇಳಲಾಗಿತ್ತು. ಇದೇ ರೀತಿ ಶ್ರೇಯಸ್ ಅಯ್ಯರ್ ಗೆ ಕೇಳಿದರೆ, ಅವರು ಮಾರ್ಚ್ 1ರಿಂದ ಆರಂಭವಾಗಲಿರುವ ಮಧ್ಯಪ್ರದೇಶ ತಂಡದ ವಿರುದ್ಧ ನಡೆಯಲಿರುವ ಇರಾನಿ ಕಪ್ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡದ ಪರ ಆಡುವ ಸಾಧ್ಯತೆ ಇದೆ.

ಮೂರನೇ ಟೆಸ್ಟ್ ಅಥವಾ ಏಕದಿನ ಸರಣಿಯಲ್ಲಿ ಆಡುವ ಸಾಧ್ಯತೆ
ಒಂದು ವೇಳೆ ಶ್ರೇಯಸ್ ಅಯ್ಯರ್ ಇರಾನಿ ಕಪ್‌ನಲ್ಲಿ ಆಡುವಂತಾದರೆ ಮೂರನೇ ಟೆಸ್ಟ್‌ನಿಂದ ಕೂಡ ಹೊರಗುಳಿಯಲಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಇದೆ.
ಒಂದು ವೇಳೆ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡರೆ ಟೆಸ್ಟ್ ಸರಣಿಯ ನಂತರ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡಕ್ಕೆ ಮರಳುವುದು ಖಚಿತವಾಗಿದೆ.
2023ರಲ್ಲಿ ಏಕದಿನ ವಿಶ್ವಕಪ್ ಇರುವುದರಿಂದ ಬಿಸಿಸಿಐ ಆಟಗಾರರ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಆದ್ದರಿಂದಲೇ ಸಂಪೂರ್ಣವಾಗಿ ಫಿಟ್ ಆಗದ ಹೊರತ ಆಟಗಾರರನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ.

ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ ವಾಪಸ್
ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ. ಬಿಸಿಸಿಐ ಬುಮ್ರಾ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ಬುಮ್ರಾ ಚೇತರಿಸಿಕೊಂಡರು ಅವರನ್ನು ಆಡಿಸುವ ಸಾಧ್ಯತೆ ಕಡಿಮೆ ಇದೆ.
ಏಕದಿನ ಪಂದ್ಯದಲ್ಲಿ ಹೆಚ್ಚಿನ ಒತ್ತಡ ಬೀಳುವುದರಿಂದ ಬುಮ್ರಾ ವಿಚಾರದಲ್ಲಿ ಮತ್ತೆ ದುಡುಕದಿರಲು ನಿರ್ಧರಿಸಿದೆ. ಒಂದು ವೇಳೆ ಅವರು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ತಪ್ಪಿಸಿಕೊಂಡರೆ, ಐಪಿಎಲ್‌ನಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ಐಪಿಎಲ್‌ನಲ್ಲಿ ಕೂಡ ಬುಮ್ರಾ ಅವರ ಕೆಲಸ ಹೊರೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.