ಭಾನುವಾರ, ಸೆಪ್ಟೆಂಬರ್ 24ರಂದು ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯ 2ನೇ ಏಕದಿನ ಪಂದ್ಯದಲ್ಲಿ ಸಿಡಿದ ಭಾರತ ತಂಡದ ಬ್ಯಾಟರ್‌ಗಳು ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 399 ರನ್ ಗಳಿಸಿದ್ದಾರೆ ಮತ್ತು ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 400 ರನ್‌ಗಳ ಗುರಿ ನೀಡಿದೆ.

ಮೊದಲ ಓವರ್‌ನಿಂದಲೇ ಆಸ್ಟ್ರೇಲಿಯಾ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಭಾರತೀಯ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸಲು ನೆರವಾದರು. ರುತುರಾಜ್ ಗಾಯಕ್ವಾಡ್ ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್‌ಗಳು ಬ್ಯಾಟ್ ಮೂಲಕ ರನ್ ಕೊಡುಗೆ ನೀಡಿದರು.
ಆರಂಭಿಕರಾಗಿ ಬಂದ ಶುಭ್ಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ ಮೊದಲ ವಿಕೆಟ್‌ಗೆ 16 ರನ್ ಗಳಿಸಿದರು. 3.4 ಓವರ್‌ಗಳಲ್ಲಿ 16 ರನ್‌ಗಳಾಗಿದ್ದಾಗ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ರುತುರಾಜ್ ಗಾಯಕ್ವಾಡ್ ಅವರು 8 ರನ್ ಗಳಿಸಿ ಜೋಶ್ ಹೇಝಲ್‌ವುಡ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಔಟಾದರು.
ಅನಂತರ ಜೊತೆಯಾದ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ ಎರಡನೇ ವಿಕೆಟ್‌ಗೆ ಬರೋಬ್ಬರಿ 200 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ನಡುವೆ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಬೆವರಿಳಿಸಿದರು ಮತ್ತು ಮೈದಾನದ ಮೂಲೆಮೂಲೆಗೂ ಚೆಂಡು ಕಳುಹಿಸಿದರು.

ಶ್ರೇಯಸ್ ಅಯ್ಯರ್ 3ನೇ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸಿ, ಗಾಯದಿಂದ ಚೇತರಿಸಿಕೊಂಡು ಅತ್ಯುತ್ತಮವಾಗಿ ಪುನರಾಗಮನ ಮಾಡಿದರು. ಸೀನ್ ಅಬಾಟ್ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ 90 ಎಸೆತಗಳಲ್ಲಿ 11 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 105 ರನ್ ಬಾರಿಸಿದರು.
ಇನ್ನು ಆರಂಭಿಕ ಶುಭ್ಮನ್ ಗಿಲ್ ಅವರು 97 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 104 ರನ್ ಬಾರಿಸಿ ಕ್ಯಾಮೆರಾನ್ ಗ್ರೀನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಹಿಡಿದ ಕ್ಯಾಚ್‌ಗೆ ಔಟಾದರು.
ಶುಭ್ಮನ್ ಗಿಲ್ ಅವರು 6ನೇ ಏಕದಿನ ಅಂತಾರಾಷ್ಟ್ರೀಯ ಶತಕ ಗಳಿಸಿದರು. ಅಲ್ಲದೆ, 2023ರಲ್ಲೇ 5 ಶತಕಗಳು ಬಂದಿವೆ ಎಂಬುದು ಗಮನಾರ್ಹ ಸಂಗತಿ.
ನಂತರ ನಾಯಕ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ವೇಗವಾಗಿ ರನ್ ಗಳಿಸಲು ನೋಡಿದರು. ಇಶಾನ್ ಕಿಶನ್ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆ ಬಳಿಕ ಜೊತೆಯಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಕೆಎಲ್ ರಾಹುಲ್ 38 ಎಸೆಗಳನ್ನು ಎದುರಿಸಿ 3 ಬೌಂಡರಿ ಮತ್ತು 3 ಬೃಹತ್ ಸಿಕ್ಸರ್‌ಗಳ ನೆರವಿನಿಂದ 52 ರನ್ ಬಾರಿಸಿ ಔಟಾದರು.
ಇನ್ನು ಕೊನೆಯಲ್ಲಿ ಭಾರತದ ಮಿ.360 ಡಿಗ್ರಿ ಎಂದೇ ಖ್ಯಾತರಾಗಿರುವ ಸೂರ್ಯಕುಮಾರ್ ಯಾದವ್ ಅಕ್ಷರಶಃ ರುದ್ರಾವತಾರ ತಾಳಿದರು. ಕ್ಯಾಮೆರಾನ್ ಗ್ರೀನ್ ಅವರ ಓವರ್‌ನಲ್ಲಿ ಸತತ 4 ಸಿಕ್ಸರ್ ಬಾರಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಕೇವಲ 37 ಎಸೆಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 72 ಚಚ್ಚಿದರು. ರವೀಂದ್ರ ಜಡೇಜಾ ಕೂಡ 9 ಎಸೆತಗಳಲ್ಲಿ 13 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಎಲ್ಲ ಬೌಲರ್‌ಗಳು ದುಬಾರಿಯಾದರು. ಸ್ಪೆನ್ಸರ್ ಜಾನ್ಸನ್ 8 ಓವರ್‌ಗಳಲ್ಲಿ 61 ರನ್ ನೀಡಿ ವಿಕೆಟ್ ರಹಿತರಾದರೆ, ಜೋಶ್ ಹೇಝಲ್‌ವುಡ್ 10 ಓವರ್‌ಗಳಲ್ಲಿ 62 ರನ್ ನೀಡಿ 1 ವಿಕೆಟ್ ಪಡೆದರು. ಸೀನ್ ಅಬಾಟ್ 10 ಓವರ್‌ಗಳಲ್ಲಿ 91 ರನ್ ನೀಡಿ 1 ವಿಕೆಟ್ ಪಡೆದರು.
ಕ್ಯಾಮೆರಾನ್ ಗ್ರೀನ್ 10 ಓವರ್‌ಗಳಲ್ಲಿ ಬರೋಬ್ಬರಿ 103 ರನ್ ನೀಡಿ 2 ವಿಕೆಟ್ ಪಡೆದು ಅತ್ಯಂತ ದುಬಾರಿಯೆನಿಸಿದರು. ಆಡಮ್ ಝಂಪಾ 10 ಓವರ್‌ಗಳಲ್ಲಿ 67 ರನ್ ನೀಡಿ 1 ವಿಕೆಟ್ ಮತ್ತು ಮ್ಯಾಥ್ಯೂ ಶಾರ್ಟ್ 2 ಓವರ್‌ಗಳಲ್ಲಿ 15 ರನ್ ನೀಡಿ ವಿಕೆಟ್ ರಹಿತರಾದರು.