ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಎಷ್ಯಾಕಪ್ ಟೂರ್ನಿಯಲ್ಲಿ ಪ್ರದರ್ಶಿಸಿದ್ದ ಫಾರ್ಮ್ ಮುಂದುವರಿಸಿದ್ದಾರೆ. ಆದರೆ ಈ ಇನ್ನಿಂಗ್ಸ್ ಶುಬ್ಮನ್ ಗಿಲ್ ಪಾಲಿಗೆ ಮತ್ತಷ್ಟು ವಿಶೇಷ. ಅದಕ್ಕೆ ಕಾರಣ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯ ನಡೆದಿದ್ದು ಅವರ ತವರು ಪಂಜಾಬ್‌ನ ಮೊಹಾಲಿಯ ಕ್ರೀಡಾಂಗಣದಲ್ಲಿ.
ಪಂದ್ಯದ ಬಳಿಕ ತವರಿನ ಮೈದಾನದಲ್ಲಿ ಆಡಿದ ಅದ್ಭುತ ಅನುಭವವನ್ನು ಅವರು ಸಂತಸದಿಂದ ಹಂಚಿಕೊಂಡಿದ್ದಾರೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣೆ 7ನೇ ವಯಸ್ಸಿನಿಂದ ಆಗಮಿಸುತ್ತಿರುವುದಾಗಿ ಹೇಳಿರುವ ಗಿಲ್ ಈ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡುವುದು ತನ್ನ ಕನಸಾಗಿತ್ತು ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಗಿಲ್ 63 ಎಸೆತಗಳನ್ನು ಎದುರಿಸಿ 74 ರನ್‌ಗಳನ್ನು ಬಾರಿಸಿದ್ದಾರೆ.

"ನಾನು ಮೊದಲ ಬಾರಿಗೆ ಮೊಹಾಲಿಗೆ ಆಗಮಿಸಿದ್ದಾಗ ನನಗೆ 7 ವರ್ಷ. ಅದಾದ ನಂತರ ಇಲ್ಲಿ ನಾನು ಸಾಕಷ್ಟು ಪಂದ್ಯಗಳನ್ನು ವೀಕ್ಷಕನಾಗಿ ನೋಡಿದ್ದೆ. ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವುದು ನನ್ನ ಕನಸಾಗಿತ್ತು. ಕೆಲ ಐಪಿಎಲ್ ಪಂದ್ಯಗಳನ್ನು ಇಲ್ಲಿ ಆಡಿದ್ದೆ, ಆದರೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕುಟುಂಬ ನೋಡುತ್ತಿರುವಾಗ ಆಡುವುದು ಬಹಳ ವಿಶೇಷ" ಎಂದಿದ್ದಾರೆ ಶುಬ್ಮನ್ ಗಿಲ್.
ಇನ್ನು ಇದೇ ಸಂದರ್ಭದಲ್ಲಿ ಪಂದ್ಯದಲ್ಲಿ ಆರಂಭಿಕನಾಗಿ ಸಾಥ್ ನಿಡಿದ ಋತುರಾಜ್ ಗಾಯಕ್ವಾಡ್ ಅವರ ಅದ್ಭುತ ಪ್ರದರ್ಶನದ ಬಗ್ಗೆಯು ಗಿಲ್ ಸಂತಸ ಹಂಚಿಕೊಂಡಿದ್ದಾರೆ. "ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಇಬ್ಬರು ಕೂಡ ತಮಗೆ ದೊರೆತ ಅವಕಾಶವನ್ನು ಸಂಪೂರ್ಣವಾಗಿ ಬಾಚಿಕೊಂಡಿದ್ದಾರೆ. ಅವರು ಪ್ರದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದು ಅವಕಾಶ ದೊರೆತಾದ ಅದನ್ನು ಬಾಚಿಕೊಳ್ಳುತ್ತಿದ್ದಾರೆ" ಎಂದಿದ್ದಾರೆ ಶುಬ್ಮನ್ ಗಿಲ್.
"ನನ್ನ ಸಾಮರ್ಥ್ಯ ಯಾವಾಗ ಆಕ್ರಮಣಕಾರಿಯಾಗಿ ಆಡಬೇಕು ಹಾಗೂ ಯಾವಾಗ ರಕ್ಷಣಾತ್ಮಕವಾಗಿ ಆಡಬೇಕು ಎನ್ನುವುದು ತಿಳಿದಿದೆ. ವಿಶ್ವಕಪ್‌ನಲ್ಲಿಯೂ ಸಂದರ್ಭಕ್ಕೆ ತಕ್ಕನಾದಂಥಾ ಪ್ರದರ್ಶನವನ್ನು ನನ್ನಿಂದ ನಿರೀಕ್ಷಿಸಬಹುದು. ಎದುರಾಳಿಗಳು, ಪರಿಸ್ಥಿತಿಗೆ ತಕ್ಕನಾಗಿ ಹೊಂದಿಕೊಂಡು ನನ್ನಿಂದಾಗುವ ಅತ್ಯುತ್ತಮ ಪ್ರದರ್ಶನ ನೀಡುವ ಪ್ರಯತ್ನ ನಾಡಲಿದ್ದೇನೆ" ಎಂದಿದ್ದಾರೆ ಶುಬ್ಮನ್ ಗಿಲ್.
ವಿಶ್ವಕಪ್ ಸನಿಹದಲ್ಲಿರುವಾಗ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಆರಂಭದಲ್ಲಿ ಮೊಹಮ್ಮದ್ ಶಮಿ ಅವರ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾ ಬ್ಯಾಟಿಂಗ್ ವಿಭಾಗದ ವಿರುದ್ಧ ಅದ್ಭುತ ಮೇಲುಗೈ ಸಾಧಿಸಿದ್ದ ಭಾರತ ಬಳಿಕ ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿತು. ಹೀಗಾಗಿ 5 ವಿಕೆಟ್‌ಗಳ ಅಂತರದ ಅದ್ಭುತ ಗೆಲುವು ಸಾಧಿಸಿದಂತಾಗಿದೆ.
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ & ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
ಬೆಂಚ್: ತಿಲಕ್ ವರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ
ಬೆಂಚ್: ಅಲೆಕ್ಸ್ ಕ್ಯಾರಿ, ಜೋಶ್ ಹ್ಯಾಜಲ್ವುಡ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ತನ್ವೀರ್ ಸಂಘ