ಈ ಆಸ್ಟ್ರೇಲಿಯಾ ಆಟಗಾರನನ್ನೇ ಸ್ಲೆಡ್ಜ್ ಮಾಡಿದ್ದ ವಿರಾಟ್ ಕೊಹ್ಲಿ
ಮೈದಾನದಲ್ಲಿ ಎದುರಾಳಿ ಆಟಗಾರರನ್ನು ಸ್ಲೆಡ್ಜ್ ಮಾಡುವುದರಲ್ಲಿ ಆಸ್ಟ್ರೇಲಿಯಾ ಆಟಗಾರರದ್ದು ಎತ್ತಿದ ಕೈ. ಕ್ರಿಕೆಟ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಾಗ ಎದುರಾಳಿ ಆಟಗಾರರನ್ನು ನಿಂದಿಸಿ, ಕೆಣಕಿ ಅವರನ್ನು ಔಟ್ ಮಾಡಿರುವ, ಬ್ಯಾಟ್‌ನಿಂದ ಉತ್ತರ ಪಡೆದುಕೊಂಡಿರುವ ಹಲವು ಉದಾಹರಣೆಗಳಿವೆ.
ಆಸ್ಟ್ರೇಲಿಯಾ ಆಟಗಾರರು ಭಾರತದ ಹಲವು ಆಟಗಾರರನ್ನು ಈ ಮೊದಲು ಕೆಣಕಿದ್ದಿದೆ. ಆದರೆ, ಸಚಿನ್ ತೆಂಡುಲ್ಕರ್ ರನ್ನು ಕೆಣಕಲು ಆಸ್ಟ್ರೇಲಿಯಾ ಆಟಗಾರರು ಹೆದರುತ್ತಿದ್ದರು ಎಂದು ಇತ್ತೀಚೆಗೆ ಬ್ರೆಟ್ ಲೀ ಬಹಿರಂಗಪಡಿಸಿದ್ದಾರೆ.
ಆದರೆ, ಭಾರತದ ಮತ್ತೋರ್ವ ಶ್ರೇಷ್ಠ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿಯನ್ನು ಕೂಡ ಕೆಣಕಲು ಆಸ್ಟ್ರೇಲಿಯಾ ಆಟಗಾರರು ಹೆದರುತ್ತಿದ್ದರು ಎಂದು ವಿರಾಟ್ ಕೊಹ್ಲಿ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ಧರಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ತಮ್ಮನ್ನು ಯಾರೇ ಕೆಣಕಿದರು ಅದಕ್ಕೆ ಮೈದಾನದಲ್ಲೇ ಉತ್ತರ ಕೊಡುವುದು ಕೊಹ್ಲಿ ಶೈಲಿ, ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಜೇಮ್ಸ್ ಫಾಕ್ನರ್ ವಿರಾಟ್ ಕೊಹ್ಲಿಯನ್ನು ಸ್ಲೆಡ್ಜ್ ಮಾಡಿ ಅದಕ್ಕೆ ತಕ್ಕುದಾದ ಉತ್ತರ ಪಡೆದಿದ್ದಾರೆ.

ಫಾಕ್ನರ್ ಗೆ ಉತ್ತರ ಕೊಟ್ಟಿದ್ದ ಕೊಹ್ಲಿ
ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯವೊಂದರಲ್ಲಿ ನಡೆದ ಘಟನೆ ಬಗ್ಗೆ ರಾಜ್‌ಕುಮಾರ್ ಶರ್ಮಾ ನೆನಪಿಸಿಕೊಂಡಿದ್ದಾರೆ. ಪದೇ ಪದೇ ಕೆಣಕುತ್ತಿದ್ದ ಫಾಕ್ನರ್ ಬಳಿಗೆ ಬಂದ ವಿರಾಟ್ ಕೊಹ್ಲಿ, "ಯಾಕೆ ನೀವು ಅಷ್ಟು ದೂರದಿಂದ ಓಡಿ ಬರುತ್ತೀರಿ? ದೂರದಿಂದ ಓಡಿ ಬಂದು ನಿಧಾನವಾಗಿ ಸ್ಪಿನ್ ಬೌಲಿಂಗ್ ಮಾಡುತ್ತಿದ್ದಿರಾ, ನೀವು ಹತ್ತಿರದಿಂದ ಓಡಿ ಬಂದು ಬೌಲಿಂಗ್ ಮಾಡಿ, ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಿ, ಏಕೆಂದೆರೆ ನಾನು ನಿಮ್ಮ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುತ್ತೇನೆ" ಎಂದು ಹೇಳಿದ್ದಾರೆ.
ಮಾತ್ರವಲ್ಲ ಫಾಕ್ನರ್ ಬೌಲಿಂಗ್‌ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿ ತಕ್ಕ ಉತ್ತರವನ್ನು ನೀಡಿದ್ದಾರೆ. ಈ ಘಟನೆ ನಂತರ ಆಸ್ಟ್ರೇಲಿಯಾದ ಆಟಗಾರರು ವಿರಾಟ್ ಕೊಹ್ಲಿಯನ್ನು ಮೈದಾನದಲ್ಲಿ ಕೆಣಕುವ ಸಾಹಸಕ್ಕೆ ಮುಂದಾಗುತ್ತಿಲ್ಲ.
IND vs AUS 2022: ಭಾರತದ ಗೆಲುವಿಗೆ ಅಡ್ಡಿಯಾಗಬಲ್ಲ ಆಸ್ಟ್ರೇಲಿಯಾದ ಮೂವರು ಆಟಗಾರರು ಇವರು

ಕೊಹ್ಲಿಯನ್ನು ಕೆಣಕುವ ಸಾಹಸ ಮಾಡಲ್ಲ
ಈ ಹಿಂದೆ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯನ್ ಆಟಗಾರರು ಕೆಣಕಿದ್ದಿದೆ, ಅದಕ್ಕೆ ವಿರಾಟ್ ಕೊಹ್ಲಿ ಕೂಡ ತಕ್ಷಣವೇ ಉತ್ತರ ಕೂಡ ಕೊಟ್ಟಿದ್ದಾರೆ. ಫಾಕ್ನರ್ ರನ್ನು ವಿರಾಟ್ ಕೊಹ್ಲಿ ಸ್ಲೆಡ್ಜ್ ಮಾಡಿದ ನಂತರ ಆಸ್ಟ್ರೇಲಿಯಾ ಆಟಗಾರರು ಕೊಹ್ಲಿ ಕೆಣಕುವುದನ್ನು ಬಿಟ್ಟಿದ್ದರು.
ಸೆಪ್ಟೆಂಬರ್ 20 ಮಂಗಳವಾರದಿಂದ ಪ್ರಾರಂಭವಾಗುವ ಮುಂಬರುವ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಆಟಗಾರರು, ವಿರಾಟ್ ಕೊಹ್ಲಿಯನ್ನು ಸ್ಲೆಡ್ಜ್ ಮಾಡದಿರಬಹುದು ಎಂದು ಅವರ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಮೊಹಾಲಿಯಲ್ಲಿ ಕೊಹ್ಲಿ ಉತ್ತಮ ದಾಖಲೆ
ವಿರಾಟ್ ಕೊಹ್ಲಿ ಮೊಹಾಲಿಯಲ್ಲಿ ಆಡಲು ಇಷ್ಟಪಡುತ್ತಾರೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ. ಮೊಹಾಲಿಯಲ್ಲಿ ಕೊನೆಯ ಬಾರಿಗೆ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾದಾಗ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಟಿ20 ಇನ್ನಿಂಗ್ಸ್ ಆಡಿದರು. 2016 ರಲ್ಲಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಗೆಲ್ಲುವುದು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಗೆಲುವು ಸಾಧಿಸಲು ಕಾರಣರಾಗಿದ್ದರು.
ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಆಡುವುದು ವಿರಾಟ್ ಕೊಹ್ಲಿಗೆ ಇಷ್ಟ, ಇಲ್ಲಿನ ಜನ ಕೂಡ ಕೊಹ್ಲಿಗೆ ಅಪಾರ ಬೆಂಬಲ ಕೊಡುತ್ತಾರೆ. ಮೊಹಾಲಿ ಪಿಚ್ ವೇಗ ಮತ್ತು ಬೌನ್ಸ್ ಹೊಂದಿದ್ದು ಬ್ಯಾಟಿಂಗ್‌ಗೆ ಅನುಕೂಲವಾಗಲಿದೆ ಎಂದು ರಾಜ್‌ಕುಮಾರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಪ್ರದರ್ಶನ ನೀಡುವ ವಿಶ್ವಾಸ
ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿರುವ ದಾಖಲೆ ಹೊಂದಿದ್ದಾರೆ. ವಿಶ್ವಕಪ್ ಆರಂಭಕ್ಕೂ ಮುನ್ನ ಕೊಹ್ಲಿ ಪ್ರದರ್ಶನ ನೀಡುವುದು ಟೀಂ ಇಂಡಿಯಾಗೆ ಮುಖ್ಯವಾಗಿದೆ.
ಮೊಹಾಲಿ ಪಿಚ್ ಕೂಡ ಆಸ್ಟ್ರೇಲಿಯಾ ಪಿಚ್‌ಗಳಂತೆ ವೇಗ ಮತ್ತು ಬೌನ್ಸ್ ಹೊಂದಿರುವುದರಿಂದ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಪಡೆ ವಿರಾಟ್ ಕೊಹ್ಲಿಗೆ ಸವಾಲಾಕಲು ಸಿದ್ಧವಾಗಿದೆ. ಆಸ್ಟ್ರೇಲಿಯಾ ವೇಗದ ಪಡೆಯನ್ನು ಕೊಹ್ಲಿ ಹೇಗೆ ಎದುರಿಸುತ್ತಾರೆ ಎನ್ನುವುದು ಮೊದಲನೇ ಪಂದ್ಯದಲ್ಲಿ ತಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications