IND vs AUS: ಭಾರತ ಯುವ ಪಡೆಯ ಆಲ್‌ರೌಂಡ್ ಪ್ರದರ್ಶನ; ಆಸ್ಟ್ರೇಲಿಯಾ ತಂಡಕ್ಕೆ ಸತತ 2ನೇ ಸೋಲು!
ಭಾನುವಾರ, ನವೆಂಬರ್ 26ರಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆತಿಥೇಯ ಭಾರತ ತಂಡ 44 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಅಗ್ರ ಕ್ರಮಾಂಕ ಬ್ಯಾಟರ್‌ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆದರೂ, ಆ ಬಳಿಕ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಕಾರಣ, 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು ಇದೀಗ ಸರಣಿ ಸೋಲಿನ ಭೀತಿಗೆ ಎದುರಾಗಿದೆ.
ಆಸ್ಟ್ರೇಲಿಯಾದ ಇನ್ನಿಂಗ್ಸ್ ಆರಂಭಿಸಿದ ಸ್ಟೀವನ್ ಸ್ಮಿತ್ ಮತ್ತು ಮ್ಯಾಥ್ಯೂ ಶಾರ್ಟ್ ಸ್ಫೋಟಕ ಆರಂಭ ಪಡೆದರು. ಆದರೆ, ತಂಡದ ಮೊತ್ತ 35 ರನ್‌ಗಳಾಗಿದ್ದಾಗ 10 ಎಸೆತಗಳಲ್ಲಿ 3 ಬೌಂಡರಿ ಮೂಲಕ 19 ರನ್ ಗಳಿಸಿದ್ದ ಮ್ಯಾಥ್ಯೂ ಶಾರ್ಟ್ ಕ್ಲೀನ್ ಬೌಲ್ಡ್ ಆದರು.
ನಂತರ ಬಂದ ಕಳೆದ ಪಂದ್ಯದ ಶತಕವೀರ ಜೋಶ್ ಇಂಗ್ಲಿಸ್ ಕೇವಲ 2 ರನ್ ಗಳಿಸಿ ಔಟಾದರು. ಇನ್ನು ಆರಂಭಿಕ ಸ್ಟೀವನ್ ಸ್ಮಿತ್ 16 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಕ್ರೀಸ್‌ಗೆ ಆಗಮಿಸಿದ ವಿಶ್ವಕಪ್ ವಿಜೇತ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸುವ ಮುನ್ಸೂಚನೆ ನೀಡಿದ್ದರು. ಆದರೆ, ದೊಡ್ಡ ಶಾಟ್ ಬಾರಿಸಲು ಹೋಗಿ ಕ್ಯಾಚ್ ನೀಡಿ ಹೊರನಡೆದರು.
ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 45 ರನ್ ಬಾರಿಸಿದರೆ, ಟಿಮ್ ಡೇವಿಡ್ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 37 ರನ್ ಗಳಿಸಿದರು. ನಾಯಕ ಮ್ಯಾಥ್ಯೂ ವೇಡ್ 23 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 42 ರನ್ ಬಾರಿಸಿ ಅಜೇಯರಾಗುಳಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ರವಿ ಬಿಷ್ಣೋಯ್ 4 ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 4 ಓವರ್‌ಗಳಲ್ಲಿ 41 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಅರ್ಶ್‌ದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಮುಕೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟ ನಿರ್ಮಿಸಿದರು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್ 25 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಇಶಾನ್ ಕಿಶನ್ ಕೂಡ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಾಯದಿಂದ 52 ರನ್ ಗಳಿಸಿ ಔಟಾದರು.
ಇನ್ನು ಮತ್ತೊಬ್ಬ ಆರಂಭಿಕ ರುತುರಾಜ್ ಗಾಯಕ್ವಾಡ್ 43 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 58 ರನ್ ಗಳಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 19 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ನಾಥನ್ ಎಲ್ಲಿಸ್ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೋಯಿನಿಸ್ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications