Ind vs Aus: ಧರ್ಮಶಾಲಾದಿಂದ 3ನೇ ಟೆಸ್ಟ್ ಸ್ಥಳಾಂತರ: ಈ ಸ್ಥಳದಲ್ಲಿ ಪಂದ್ಯ ಆಯೋಜನೆ

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ 3ನೇ ಟೆಸ್ಟ್ ಪಂದ್ಯವನ್ನು ಧರ್ಮಶಾಲಾದಿಂದ ಸ್ಥಳಾಂತರ ಮಾಡುವುದು ಖಚಿತವಾಗಿದೆ. ಮೊಹಾಲಿಯಲ್ಲಿ 3ನೇ ಟೆಸ್ಟ್ ಪಂದ್ಯ ನಡೆಯುವುದು ಬಹುತೇಕ ಖಚಿತ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 1ರಿಂದ ಆರಂಭವಾಗಲಿದ್ದ ಭಾರತ ಆಸ್ಟ್ರೇಲಿಯಾ ಸರಣಿಯ ಮೂರನೇ ಪಂದ್ಯಕ್ಕೆ ಸುಂದರವಾದ ಕ್ರೀಡಾಂಗಣ ಧರ್ಮಶಾಲಾ ಆತಿಥ್ಯ ವಹಿಸಬೇಕಿತ್ತು. ಮಳೆಯಿಂದಾಗಿ ಭಾರಿ ಹಾನಿಗೊಳಗಾಗಿದ್ದ ಧರ್ಮಶಾಲಾ ಕ್ರೀಡಾಂಗಣವನ್ನು ನವೀಕರಿಸಲಾಗುತ್ತಿದೆ.
ಟೆಸ್ಟ್ ಪಂದ್ಯ ಆರಂಭವಾಗಲು ಇನ್ನೂ ಎರಡೇ ವಾರಗಳ ಸಮಯ ಇರುವುದರಿಂದ, ಅಷ್ಟರಲ್ಲಿ ಕ್ರೀಡಾಂಗಣ ಸಜ್ಜುಗೊಳಿಸುವುದು ಅಸಾಧ್ಯವಾದ ಕಾರಣ ಟೆಸ್ಟ್ ಪಂದ್ಯವನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕ್ರೀಡಾಂಗಣದ ಔಟ್‌ಫೀಲ್ಡ್ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕನಿಷ್ಠ 1 ತಿಂಗಳು ಬೇಕಾಗುತ್ತದೆ ಎಂದು ಹೇಳಲಾಗಿದೆ.
"ಅನಿವಾರ್ಯ ಕಾರಣಗಳಿಂದಾಗಿ ಪಂದ್ಯವನ್ನು ಧರ್ಮಶಾಲಾದಿಂದ ಸ್ಥಳಾಂತರ ಮಾಡಲೇಬೇಕಾಗಿದೆ. ಮೂರನೇ ಟೆಸ್ಟ್ ಪ್ರಾರಂಭದ ವೇಳೆಗೆ ಕ್ರೀಡಾಂಗಣ ಸಂಪೂರ್ಣವಾಗಿ ಸಿದ್ಧವಾಗುವುದಿಲ್ಲ. ಕ್ರೀಡಾಂಗಣವನ್ನು ಸಿದ್ಧಪಡಿಸಲು ಹೆಚ್‌ಪಿಸಿಎ ಎಲ್ಲವನ್ನೂ ಮಾಡುತ್ತಿದೆ. ಆದರೆ, ಅಂತಾರಾಷ್ಟ್ರೀಯ ಪಂದ್ಯಕ್ಕೆ ತಕ್ಕಂತೆ ಔಟ್‌ಫೀಲ್ಡ್ ಸಿದ್ಧವಾಗಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಇಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಸುವುದು ಸಾಧ್ಯವಿಲ್ಲ" ಎಂದು ಬಿಸಿಸಿಐ ಹಿರಿಯ ಅಧಿಕಾರಿ ತಿಳಿಸಿರುವುದಾಗಿ ಇನ್ಸೈಡ್‌ಸ್ಪೋರ್ಟ್ ವರದಿ ಮಾಡಿದೆ.

ಏಕದಿನ ವಿಶ್ವಕಪ್‌ಗಾಗಿ ನವೀಕರಣ ಕಾರ್ಯ
2023ರ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಪಂದ್ಯವನ್ನು ಆಯೋಜಿಸುವ ಸಲುವಾಗಿ ನವೀಕರಣ ಕಾರ್ಯವನ್ನು ಆರಂಭಿಸಲಾಗಿತ್ತು, 2022ರ ಫೆಬ್ರವರಿಯಿಂದ ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿಲ್ಲ. ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾ ಟಿ20 ಪಂದ್ಯ ಇಲ್ಲಿ ನಡೆದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಧರ್ಮಶಾಲಾ ಅಂಗಳದ ಔಟ್‌ಫೀಲ್ಡ್ ಅನ್ನು ರಿಲೇ ಮಾಡಲು ಮತ್ತು ಹೊಸ ಒಳಚರಂಡಿ ವ್ಯವಸ್ಥೆ ಮಾಡಲು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಹೆಚ್‌ಪಿಸಿಎ) ನಿರ್ಧರಿಸಿದೆ. ಚಳಿಗಾಲದ ಕಾರಣದಿಂದಾಗಿ ಹುಲ್ಲು ಹೊದಿಕೆ ಸಂಪೂರ್ಣವಾಗಿ ಹಿಡಿದಿಲ್ಲದ ಕಾರಣ, ಮೈದಾನದ ತುಂಬ ಪ್ಯಾಚ್‌ಗಳಿವೆ. ಫೆ.3ರಂದು ಬಿಸಿಸಿಐ ಪರಿಶೀಲನೆ ನಡೆಸಿದಾಗ ಸ್ಥಳದ ಸ್ಥಿತಿಗತಿ ಬಗ್ಗೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ಮೊಹಾಲಿ ಅಂತಿಮವಾಗುವ ಸಾಧ್ಯತೆ
"ಧರ್ಮಶಾಲಾ ಟೆಸ್ಟ್ ಅನ್ನು ಆಯೋಜಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ವಿಶ್ವಕಪ್‌ಗಿಂತ ಮೊದಲು ಅಲ್ಲಿ ಕೆಲವು ಪಂದ್ಯಗಳನ್ನು ಆಯೋಜಿಸಲು ಪ್ರಯತ್ನಿಸುತ್ತೇವೆ. 3ನೇ ಟಸ್ಟ್ ಪಂದ್ಯವನ್ನು ಆಯೋಜಿಸಲು ಮೊಹಾಲಿ ಸಿದ್ಧವಾಗಿದೆ. ವೈಜಾಗ್, ಇಂದೋರ್ ಮತ್ತು ಪುಣೆ ಇತರೆ ಆಯ್ಕೆಗಳಾಗಿದ್ದು, ಮಧ್ಯಸ್ಥಗಾರರೊಂದಿಗೆ ಮಾತನಾಡಿದ ನಂತರ ನಾವು ಅಧಿಕೃತವಾಗಿ ತಿಳಿಸಲಾಗುವುದು" ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಧರ್ಮಶಾಲಾ ಸ್ಟೇಡಿಯಂ ಮಧ್ಯ ಹಿಮಾಲಯದ ಧೌಲಾಧರ್ ಪರ್ವತ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ 2016-17 ಆವೃತ್ತಿಯಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications