Ind vs Aus Test: ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ : ಪ್ರಮುಖ ವೇಗಿ ಸರಣಿಯಿಂದ ಹೊರಕ್ಕೆ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತು ಕಂಗಾಲಾಗಿರುವ ಆಸ್ಟ್ರೇಲಿಯಾ ತಂಡಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಎರಡನೇ ಟೆಸ್ಟ್ ಪಂದ್ಯದ ಸಮಯದಲ್ಲಿ ಗಾಯಗೊಂಡ ವಾರ್ನರ್ ಸರಣಿಯಿಂದ ಹೊರಬಿದ್ದಿದ್ದರು, ಈಗ ಪ್ರಮುಖ ವೇಗಿ ಕೂಡ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ತಂಡದ ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಹೊರಗುಳಿದಿದ್ದರು. ದೆಹಲಿ ಟೆಸ್ಟ್ ಬಳಿಕ ನಾಯಕ ಪ್ಯಾಟ್ ಕಮಿನ್ಸ್ ವೈಯಕ್ತಿಕ ಕಾರಣಗಳಿಂದಾಗಿ ತುರ್ತಾಗಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಅವರು ಎರಡು ಮೂರು ದಿನಗಳ ಬಳಿಕ ಮತ್ತೆ ಭಾರತಕ್ಕೆ ಮರಳುವ ಸಾಧ್ಯತೆ ಇದೆ.
ಮೊದಲೇ ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡಕ್ಕೆ ಈ ಘಟನೆಗಳು ಮತ್ತಷ್ಟು ಹಿನ್ನಡೆ ತಂದುಕೊಡುತ್ತವೆ. ತಂಡದ ಆಟಗಾರರ ಆತ್ಮವಿಶ್ವಾಸ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾ ತಂಡಕ್ಕೆ ಸಮಾಧಾನಕರ ಸುದ್ದಿಯೂ ಸಿಕ್ಕಿದೆ.
ಪ್ರಮುಖ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

ಸರಣಿ ಕಳೆದುಕೊಂಡ ಆಸ್ಟ್ರೇಲಿಯಾ
ಸದ್ಯ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಟೆಸ್ಟ್ ತಂಡವಾಗಿರುವ ಆಸ್ಟ್ರೇಲಿಯಾ ಭಾರತದ ವಿರುದ್ಧ ಸತತವಾಗಿ ಎರಡು ಪಂದ್ಯ ಸೋಲುವ ಮೂಲಕ ಮುಖಭಂಗಕ್ಕೆ ಒಳಗಾಗಿದೆ. ಮೊದಲ ಎರಡೂ ಪಂದ್ಯಗಳನ್ನು ಮೂರೇ ದಿನದಲ್ಲಿ ಸೋತಿದೆ. 0-2 ಹಿನ್ನಡೆ ಅನುಭವಿಸುವ ಮೂಲಕ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದ ಆಸ್ಟ್ರೇಲಿಯಾಗೆ ಹೊಸ ಸಂಕಷ್ಟ ಶುರುವಾಗಿದೆ. ಉಳಿದ ಎರಡೂ ಪಂದ್ಯಗಳಲ್ಲಿ ಅವರು ಸೋತರೆ ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಆಸ್ಟ್ರೇಲಿಯಾ ಫೈನಲ್‌ನಲ್ಲಿ ಆಡುವ ಅರ್ಹತೆ ಕಳೆದುಕೊಳ್ಳಲಿದೆ. ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನಾದರೂ ಡ್ರಾ ಮಾಡಿಕೊಳ್ಳುವ ಅಥವಾ ಗೆಲುವು ಸಾಧಿಸುವ ಯೋಜನೆಯಲ್ಲಿ ಆಸ್ಟ್ರೇಲಿಯಾ.

3ನೇ ಟೆಸ್ಟ್‌ಗೆ ಭಾರಿ ಬದಲಾವಣೆ
ಸರಣಿಯ ಮೂರನೇ ಪಂದ್ಯ ಮಾರ್ಚ್ 1 ರಿಂದ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯಾ 3ನೇ ಟೆಸ್ಟ್‌ನಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಮಿಚೆಲ್ ಸ್ಟಾರ್ಕ್ ಫಿಟ್ ಆಗಿರುವುದರಿಂದ ಅವರು ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಮ್ಯಾಟ್ ರೆನ್‌ಶಾ ಬದಲಿಗೆ ಆಲ್‌ರೌಂಡರ್ ಕೆಮರಾನ್ ಗ್ರೀನ್ ಆಡುವ ಸಾಧ್ಯತೆ ಹೆಚ್ಚಾಗಿದೆ. ಮೂರನೇ ಟೆಸ್ಟ್‌ಗೆ ಸಿದ್ಧವಾಗಲು ಹೆಚ್ಚಿನ ಅವಕಾಶ ಸಿಕ್ಕಿರುವುದರಿಂದ ಆಸ್ಟ್ರೇಲಿಯಾ ಸಾಕಷ್ಟು ಚಿಂತನೆ ನಡೆಸಲಿದೆ.

ಸ್ಪಿನ್ ದಾಳಿ ಎದುರಿಸುವುದೇ ಸಮಸ್ಯೆ
ಇಂದೋರ್ ಅಂಗಳದಲ್ಲಿ ಆಸ್ಟ್ರೇಲಿಯಾ ತಂಡ ಮತ್ತೆ ಸ್ಪಿನ್ ಪಿಚ್‌ನಲ್ಲಿ ಆಡಬೇಕಿದೆ. ರವಿಚಂದ್ರನ್ ಅಶ್ವಿನ್ ಈ ಅಂಗಳದಲ್ಲಿ ಆಡಿರುವ ಎರಡೇ ಪಂದ್ಯಗಳಲ್ಲಿ 18 ವಿಕೆಟ್ ಪಡೆದುಕೊಂಡಿದ್ದಾರೆ. ಇದು ಆಸ್ಟ್ರೇಲಿಯಾ ಆಟಗಾರರ ನಿದ್ದೆಗೆಡಿಸಿದೆ.
ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸಮಸ್ಯೆಯಾಗಿರುವುದೇ ಬ್ಯಾಟಿಂಗ್, ಅವರ ಬೌಲಿಂಗ್ ಉತ್ತಮವಾಗಿದ್ದರೂ ಬ್ಯಾಟರ್ ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಜಡೇಜಾ, ಅಶ್ವಿನ್ ದಾಳಿಯನ್ನು ಎದುರಿಸುವುದೇ ಅವರ ದೊಡ್ಡ ಸಮಸ್ಯೆಯಾಗಿದೆ.
ದೆಹಲಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿದ ರೀತಿಗೆ ತಂಡದ ಮಾಜಿ ಆಟಗಾರರೇ ಶಾಕ್‌ಗೆ ಒಳಗಾಗಿದ್ದಾರೆ. ತಂಡದ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಟೀಕೆ ಮಾಡಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications