Ind vs Aus Test: ಭಾರತ ಮೊದಲ ಟೆಸ್ಟ್ ಗೆದ್ದ ನಂತರ ಹೇಗಿದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಮತ್ತು 132 ರನ್‌ಗಳ ಗೆಲುವು ಸಾಧಿಸಿದೆ. ಈ ಜಯದ ನಂತರ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮತ್ತಷ್ಟು ಸನಿಹವಾಗಿದೆ.
ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಕ್ರಮವಾಗಿ ತಲಾ 5 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣವಾದರು. ಮೂರೇ ದಿನದಲ್ಲಿ ಭಾರತ ಪಂದ್ಯವನ್ನು ಗೆದ್ದು, ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನಿಂದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಸುಧಾರಿಸಿಕೊಂಡಿದೆ.
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯನ್ನು ನವೀಕರಿಸಲಾಗಿದೆ. ಭಾರತ 61.67 ಗೆಲುವಿನ ಶೇಕಡಾವಾರು ಪ್ರಮಾಣ (ಪಿಸಿಟಿ)ಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 70.83 ಪಿಸಿಟಿಯೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಭಾರತ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

ಎರಡು ಪಂದ್ಯಗಳಲ್ಲಿ ಗೆಲ್ಲಬೇಕಿದೆ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ಭಾರತಕ್ಕೆ ಭಾರಿ ಅನುಕೂಲವಾಗಿದೆ. ಉಳಿದ ಮೂರು ಪಂದ್ಯಗಳಲ್ಲಿ ಭಾರತ ಕನಿಷ್ಠ ಎರಡು ಪಂದ್ಯ ಗೆದ್ದರೂ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಅಥವಾ 1 ಪಂದ್ಯವನ್ನು ಗೆದ್ದು ಉಳಿದ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡರೂ ಭಾರತ ಫೈನಲ್ ತಲುಪಲಿದೆ.
ಮೊದಲ ಟೆಸ್ಟ್ ಗೆಲುವಿಗೆ ಮುನ್ನ ಭಾರತ 58.39 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಮೊದಲನೇ ಟೆಸ್ಟ್ ಗೆಲುವಿನ ಬಳಿಕ ಪಿಸಿಟಿಯನ್ನು 61.67ಗೆ ಹೆಚ್ಚಿಸಿಕೊಂಡಿದೆ. ಮೊದಲನೇ ಟೆಸ್ಟ್‌ಗೆ ಮುನ್ನ ಆಸ್ಟ್ರೇಲಿಯಾ 75.56 ಪಿಸಿಟಿಯನ್ನು ಹೊಂದಿತ್ತು, ಭಾರತದ ವಿರುದ್ಧ ಮೊದಲನೇ ಟೆಸ್ಟ್ ಸೋಲುವ ಮೂಲಕ ಪಿಸಿಟಿ 70.83ಗೆ ಕಡಿಮೆಯಾಗಿದೆ.

ಶ್ರೀಲಂಕಾ, ದಕ್ಷಿಣ ಆಫ್ರಿಕಾ ರೇಸ್‌ನಲ್ಲಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕೂಡ ಫೈನಲ್‌ಗೆ ಅರ್ಹತೆ ಪಡೆಯಲು ರೇಸ್‌ನಲ್ಲಿವೆ. ಆದರೆ ಇವೆರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುವುದು ಭಾರತ ತಂಡದ ಪ್ರದರ್ಶನದ ಮೇಲೆ ನಿಂತಿದೆ.
ಭಾರತ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದರೂ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ರೇಸ್‌ನಿಂದ ಹೊರಬೀಳಲಿವೆ. ಶ್ರೀಲಂಕಾ 53.33 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಅದು ಮುಂದಿನ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ದಕ್ಷಿಣ ಆಫ್ರಿಕಾ 48.72 ಪಿಸಿಟಿಯೊಂದಿಗೆ 4ನೇ ಸ್ಥಾನದಲ್ಲಿದ್ದು, ಮುಂದಿನ ಟೆಸ್ಟ್ ಸರಣಿಯನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ರ್‍ಯಾಂಕಿಂಗ್‌ನಲ್ಲಿ ನಂಬರ್ 1
ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದರೆ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಲಿದೆ. ಇದರೊಂದಿಗೆ ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಮಾದರಿಯಲ್ಲಿ ನಂಬರ್ 1 ತಂಡವಾಗಲಿದೆ. ಈಗಾಗಲೇ ಏಕದಿನ ಮತ್ತು ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್ 7 ರಂದು ಆರಂಭವಾಗಲಿದೆ. ಲಂಡನ್‌ನ ಓವಲ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದರೆ ಜೂನ್ 12 ರಂದು ಹೆಚ್ಚುವರಿಯಾಗಿ ನಿಗದಿ ಪಡಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications