ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಡಿಸೆಂಬರ್ 26 ರಿಂದ ಆರಂಭವಾಗಲಿರುವ ಬಾಂಕ್ಸಿಂಗ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದುವರೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಈ ಕಾರಣಕ್ಕೆ ಅವರ ವಿರುದ್ಧವೂ ಟೀಕೆ ವ್ಯಕ್ತವಾಗುತ್ತಿದೆ. ಶುಭಮನ್ ಗಿಲ್ 2 ಟೆಸ್ಟ್ ಪಂದ್ಯಗಳಲ್ಲಿ 20ರ ಸರಾಸರಿಯಲ್ಲಿ ಕೇವಲ 60 ರನ್ ಗಳಿಸಿದ್ದಾರೆ.
ಟೀಕೆಗಳ ನಡುವೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರಿಂದ ಶುಭಮನ್ ಗಿಲ್ ಉತ್ತಮ ಸಲಹೆಯನ್ನು ಪಡೆದಿದ್ದಾರೆ. ಶುಭಮನ್ ಅವರು ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿರುವ ಕಾರಣ ವಿದೇಶಿ ಪ್ರವಾಸಗಳಲ್ಲಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಿಕಿ ಪಾಂಟಿಂಗ್, 'ನನಗೆ ಶುಭಮನ್ ಗಿಲ್ ಆಟ ನೋಡಲು ಇಷ್ಟ. ಆದರೆ ವಿದೇಶದಲ್ಲಿ ಅವರ ಪ್ರದರ್ಶನವು ಒಂದೇ ಆಗಿಲ್ಲ. ಇದಕ್ಕೆ ಉದಾಹರಣೆ ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಗಿಲ್ ತಮ್ಮ ಬ್ಯಾಟಿಂಗ್ ತಂತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ. ಇದರಿಂದಾಗಿ ಅವರು ರನ್ ಗಳಿಸಲು ಸಾಧ್ಯವಾಗಲಿಲ್ಲ. ಅವರು ಆಡಿಲೇಡ್‌ನಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದೆ. ಅವರು ಸಾಕಷ್ಟು ಬದಲಾಗಿದ್ದಾರೆ ಅಂದುಕೊಂಡಿದ್ದೇನೆ. ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ ಮಾಡುತ್ತಿರುವಾಗ ಅವರು ಆಫ್ ಸ್ಟಂಪ್ ಮೇಲೆ ಬಿದ್ದ ಚೆಂಡಿನ ಮೇಲೆ ತಮ್ಮ ಮುಂಭಾಗದ ಪ್ಯಾಡ್ ಅನ್ನು ಮುಂದಕ್ಕೆ ತಳ್ಳಿದರು. ಬೋಲ್ಯಾಂಡ್ ಅವರನ್ನು ಬೌಲ್ಡ್ ಮಾಡಿದರು. ಹೀಗಾಗಿ ಅವರು ತನ್ನನ್ನು ನಂಬಬೇಕು. ಇದನ್ನು ಮಾಡಿದ ಬಳಿಕ ಅವರು ರನ್ ಗಳಿಸಲು ಪ್ರಾರಂಭಿಸುತ್ತಾರೆ ಎಂದು ಸಲಹೆ ಕೊಟ್ಟಿದ್ದಾರೆ.
ಶುಭಮನ್ ಗಿಲ್ ತನ್ನನ್ನು ತಾನೇ ನಂಬಿಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕು. ಅವರು ಆಸ್ಟ್ರೇಲಿಯಾದಲ್ಲಿ ರನ್ ಗಳಿಸಲು ತಮ್ಮ ರಕ್ಷಣಾತ್ಮಕ ತಂತ್ರದಲ್ಲಿ ಸ್ವಲ್ಪ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಔಟಾಗುವ ಬಗ್ಗೆ ಯೋಚಿಸದೆ ಕೇವಲ ರನ್ ಗಳಿಸುವ ಬಗ್ಗೆಯೇ ಯೋಚಿಸುತ್ತಿದ್ದಾಗ ಪ್ರಪಂಚದ ಎಲ್ಲೆಡೆ ಆಕ್ರಮಣಕಾರಿಯಾಗಿ ಆಡುವ ಮೂಲಕ ರನ್ ಗಳಿಸಿದ್ದಾರೆ. ಅವರೂ ಅದೇ ಮನಸ್ಥಿತಿಯಿಂದ ಇಲ್ಲಿಗೆ ಬರಬೇಕು ಎಂದು ಪಾಂಟಿಂಗ್ ಕಿವಿ ಮಾತು ಹೇಳಿದ್ದಾರೆ.
ಶುಭಮನ್ ಗಿಲ್ ಹೆಬ್ಬೆರಳಿನ ಗಾಯದಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಉತ್ತಮವಾಗಿ ಆಡಿದರು. ಆದರೆ ತಮ್ಮ ಆಟವನ್ನು ದೊಡ್ಡ ಇನ್ನಿಂಗ್ಸ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಬೇಗನೆ ಔಟಾದರು. ನಂತರ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅರ್ಧಶತಕಗಳನ್ನು ಗಳಿಸಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.