Ind Vs Aus Test: ಮೊದಲನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿರುವ ಭಾರತದ ಬೌಲರ್‌ಗಳು ಇವರು

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಭಾರತ ತಂಡ ಎಲ್ಲಾ ರೀತಿಯಿಂದಲೂ ಸಜ್ಜಾಗುತ್ತಿದೆ. ನಾಯಕ ರೋಹಿತ್ ಶರ್ಮಾ ನಾಯಕನಾಗಿದ್ದರೂ ಇದು ಅವರು ಆಡುತ್ತಿರುವ ಮೂರನೇ ಪಂದ್ಯವಾಗಿದೆ.
ನಾಯಕನಾಗಿ ರೋಹಿತ್ ಶರ್ಮಾಗೆ ಈ ಸರಣಿ ಮುಖ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತ ಈ ಸರಣಿಯಲ್ಲಿ ಗೆಲ್ಲಬೇಕಿದೆ. ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಲು ಹಿಟ್‌ಮ್ಯಾನ್‌ಗೆ ಇದು ಉತ್ತಮ ಅವಕಾಶ.
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಲು ಎಲ್ಲಾ ರೀತಿಯ ರಣತಂತ್ರ ರೂಪಿಸುತ್ತಿದೆ. ಪ್ರಮುಖ ಬೌಲರ್ ಗಳನ್ನು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಸಲು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಪ್ಲ್ಯಾನ್ ಮಾಡಿದ್ದಾರೆ.
ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಭಾರತದ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ. ರವೀಂದ್ರ ಜಡೇಜಾ ಫಿಟ್ ಆಗಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಭಾರತದ ಪ್ರಮುಖ ಬೌಲರ್ ಗಳು ಇವರು.

ಪ್ರಮುಖ ವೇಗದ ಅಸ್ತ್ರ ಸಿರಾಜ್
ಮೊಹಮ್ಮದ್ ಸಿರಾಜ್ ಸದ್ಯ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಭಾರತದಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಮಾರಕ ಬೌಲಿಂಗ್ ಮಾಡಿದ್ದರು.
ಹೊಸ ಚೆಂಡಿನಲ್ಲಿ ರಿವರ್ಸ್ ಸ್ವಿಂಗ್ ಮಾಡುವ ಅವರ ಸಾಮರ್ಥ್ಯ ಅವರನ್ನು ಮಾರಕ ವೇಗಿಯನ್ನಾಗಿಸಿದೆ. ಸಿರಾಜ್ ಇದುವರೆಗೆ ಆಡಿರುವ 15 ಟೆಸ್ಟ್ ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ. ಭಾರತದಲ್ಲಿ ಸಿರಾಜ್ ಇದುವರೆಗೂ ಕೇವಲ 6 ವಿಕೆಟ್ ಮಾತ್ರ ಪಡೆದಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ.

ಹಿರಿಯ ಬೌಲರ್ ಉಮೇಶ್ ಯಾದವ್
ಉಮೇಶ್ ಯಾದವ್ ತವರಿನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಭಾರತದಲ್ಲಿ ಆಡಿರುವ 30 ಟೆಸ್ಟ್ ಪಂದ್ಯಗಳಲ್ಲಿ 25.16 ಸರಾಸರಿಯಲ್ಲಿ 98 ವಿಕೆಟ್ ಪಡೆದಿದ್ದಾರೆ. ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡವನ್ನು ಮುನ್ನಡೆಸಿರುವ ಉಮೇಶ್ ಯಾದವ್‌ಗೆ ಇಲ್ಲಿನ ಪಿಚ್ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಮೇಶ್ ಯಾದವ್ ಪ್ರದರ್ಶನ ನೀಡಿದ್ದರು. ಜಯದೇವ್ ಉನದ್ಕತ್ ಮತ್ತು ಮೊಹಮ್ಮದ್ ಶಮಿ ಇದ್ದರೂ, ಸ್ಥಳೀಯ ಆಟಗಾರನಾಗಿರುವ ಉಮೇಶ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಟ್ರಂಪ್ ಕಾರ್ಡ್ ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್ ಬಗ್ಗೆ ಆಸ್ಟ್ರೇಲಿಯಾ ಆಟಗಾರರು ಸಾಕಷ್ಟು ಭಯ ಇಟ್ಟುಕೊಂಡಿದ್ದಾರೆ. ಅದರಲ್ಲೂ ಎಡಗೈ ಬ್ಯಾಟರ್ ಗಳ ವಿರುದ್ಧ ಅಶ್ವಿನ್ ಸಾಕಷ್ಟು ಉತ್ತಮ ದಾಖಲೆ ಹೊಂದಿದ್ದಾರೆ.
ಇದುವರೆಗೂ ಆಸ್ಟ್ರೇಲಿಯಾ ವಿರುದ್ಧ ಆಡಿರುವ ಎಂಟು ಪಂದ್ಯಗಳಲ್ಲಿ ಅಶ್ವಿನ್ 50 ವಿಕೆಟ್ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ಭಾರತದ ಪ್ರಮುಖ ಅಸ್ತ್ರವಾಗಿದ್ದಾರೆ.
ಸ್ಪಿನ್ ವಿರುದ್ಧ ಆಡಲು ಆಸ್ಟ್ರೇಲಿಯಾ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಶ್ವಿನ್ ರೀತಿಯೇ ಬೌಲಿಂಗ್ ಮಾಡುವ ಮಹೇಶ್ ಪಿಥಿಯಾ ಅವರನ್ನು ಕಂಡುಕೊಂಡಿದ್ದು, ನೆಟ್ಸ್‌ನಲ್ಲಿ ಸಾಕಷ್ಟು ಅಭ್ಯಾಸ ಮಾಡುತ್ತಿದೆ.

ಫಿಟ್ ಆಗಿರುವ ಜಡೇಜಾ
ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಮರಳಿದ್ದಾರೆ. ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಕೂಡ ಜಡೇಜಾ ಭಾರತಕ್ಕೆ ಕೊಡುಗೆ ನೀಡಿದ್ದಾರೆ. ವಾಪಸಾಗಿರುವುದು ತಂಡದ ಸಮತೋಲನವನ್ನು ಹೆಚ್ಚಿಸಿದೆ. ಎಡಗೈ ಸ್ಪಿನ್ನರ್, ಕಳೆದ ಬಾರಿ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ನಡೆದಾಗ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 25 ವಿಕೆಟ್ ಪಡೆಯುವ ಮೂಲಕ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು.

ಪ್ರಮುಖ ಸ್ಪಿನ್ನರ್ ಅಕ್ಷರ್ ಪಟೇಲ್
ನಾಗ್ಪುರ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಭಾರತ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಅಕ್ಷರ್ ಪಟೇಲ್ ಭಾರತದಲ್ಲಿ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದಾರೆ.
2021ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ಎದುರಾಳಿ ತಂಡಗಳಲ್ಲಿ ಭಯ ಹುಟ್ಟಿಸಿದ್ದಾರೆ. ಇದುವರೆಗೂ 8 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅವರು 14.29 ಸರಾಸರಿಯಲ್ಲಿ 47 ವಿಕೆಟ್ ಪಡೆದಿದ್ದಾರೆ. ಇದುವರೆಗೂ ಆಸ್ಟ್ರೇಲಿಯಾ ಆಟಗಾರರು ಅಕ್ಷರ್ ಪಟೇಲ್ ವಿರುದ್ಧ ಆಡಿಲ್ಲ, ಹೊಸ ಅಸ್ತ್ರವನ್ನು ಬಳಸಲು ರೋಹಿತ್ ಶರ್ಮಾ ಉತ್ಸುಕರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications