
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಭಾರತದಲ್ಲಿ ಕೂಡ ಹೆಚ್ಚಿನ ಜನಪ್ರಿಯತೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ವೇಳೆ ಅಮೋಘ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಕ್ರಿಕೆಟ್ ಹೊರತುಪಡಿಸಿ ಡೇವಿಡ್ ವಾರ್ನರ್ ಇನ್‌ಸ್ಟಾಗ್ರಾಂನಲ್ಲಿ ವಿಭಿನ್ನ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಭಾರತದ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡುವುದು ಹಂಚುವುದು ಮಾಡುತ್ತಾರೆ. ವಾರ್ನರ್ ಅನೇಕ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಸದ್ಯ, ಡೇವಿಡ್ ವಾರ್ನರ್ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಭಾರತಕ್ಕೆ ಬಂದಿದ್ದಾರೆ. ಭಾರತದಲ್ಲಿ ಡೇವಿಡ್ ವಾರ್ನರ್ ಜನಪ್ರಿಯತೆ ಕಂಡು ಆಸ್ಟ್ರೇಲಿಯಾ ತಂಡದ ಬ್ಯಾಟರ್ ಉಸ್ಮಾನ್ ಖವಾಜಾ ಕೂಡ ಶಾಕ್ ಆಗಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೇವಿಡ್ ವಾರ್ನರ್ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಕಷ್ಟು ಅಭಿಮಾನಿಗಳು ಮುಂದೆ ಬಂದರು. ಆಸ್ಟ್ರೇಲಿಯಾ ತಂಡದ ಎಲ್ಲಾ ಆಟಗಾರರು ಅಲ್ಲೇ ಇದ್ದರೂ ಕೂಡ ಅಭಿಮಾನಿಗಳು ಸೆಲ್ಫಿ ಕೇಳಿದ್ದು ಮಾತ್ರ ಡೇವಿಡ್ ವಾರ್ನರ್ ಬಳಿ.
ಡೇವಿಡ್ ವಾರ್ನರ್ ಅಭಿಮಾನಿಗಳ ಜೊತೆ ಫೋಟೊಗೆ ಫೋಸ್ ಕೊಡುವ ವಿಡಿಯೋವನ್ನು ಉಸ್ಮಾನ್ ಖವಾಜ ಹಂಚಿಕೊಂಡಿದ್ದು, ಎಂದಿಗೂ ಮುಗಿಯುವುದಿಲ್ಲ (ನೆವರ್ ಎಂಡಿಂಗ್) ಎನ್ನುವ ಶೀರ್ಷಿಕೆ ನೀಡಿದ್ದಾರೆ.
ನಾಗ್ಪುರಕ್ಕೆ ಪ್ರಯಾಣಿಸಿದ ಆಸ್ಟ್ರೇಲಿಯಾ
ಫೆಬ್ರವರಿ 1 ರಂದು ಭಾರತಕ್ಕೆ ಆಗಮಿಸಿದ್ದ ಆಸ್ಟ್ರೇಲಿಯಾ ತಂಡ ಫೆಬ್ರವರಿ 2ರಿಂದ 5ರವರೆಗೆ ಬೆಂಗಳೂರು ಹೊರವಲಯದ ಆಲೂರಿನಲ್ಲಿ 5 ದಿನಗಳ ಕಾಲ ಕಠಿಣ ಅಭ್ಯಾಸ ಮಾಡಿದ್ದರು. ಫೆಬ್ರವರಿ 6ರಂದು ಆಸ್ಟ್ರೇಲಿಯಾ ತಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಪ್ರಯಾಣ ಮಾಡಿದ್ದಾರೆ. ಫೆಬ್ರವರಿ 9ರಂದು ನಾಗ್ಪುರ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಆಸ್ಟ್ರೇಲಿಯಾ ತಂಡದ ಆಟಗಾರರು ನಾಗ್ಪುರಕ್ಕೆ ತೆರಳಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಬೇಡಿಕೆಯಿಟ್ಟರು.
ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಡೇವಿಡ್ ವಾರ್ನರ್ ಸಮಾಧಾನದಿಂದಲೇ ಎಲ್ಲರ ಜೊತೆ ಫೋಟೊಗೆ ಫೋಸ್ ನೀಡಿದರು. ಇದನ್ನು ಇನ್ನೊಂದು ಬದಿಯಲ್ಲಿದ್ದ ಉಸ್ಮಾನ್ ಖವಾಜಾ ವಿಡಿಯೋ ಮಾಡಿದ್ದಾರೆ.
ಡೇವಿಡ್ ವಾರ್ನರ್ ಮೇಲೆ ಭಾರತೀಯರಿಗೆ ಇರುವ ಅಭಿಮಾನ ಕಂಡು ಆಸ್ಟ್ರೇಲಿಯಾ ಆಟಗಾರರೇ ಶಾಕ್ ಆಗಿದ್ದಾರೆ.