Ind vs Aus 4th Test: ನಾನಾಗಿದ್ರೆ ಔಟ್ ಆಗಿರ್ತಿದ್ದೆ: ಅಂಪೈರ್ ನಿತಿನ್ ಮೆನನ್ ಕಾಲೆಳೆದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿಗೂ ಅಂಪೈರ್ ನಿತಿನ್ ಮೆನನ್‌ಗೂ ವಿಭಿನ್ನವಾದ ನಂಟಿದೆ. ವಿರಾಟ್ ಕೊಹ್ಲಿ ವಿಚಾರದಲ್ಲಿ ನಿತಿನ್ ಮೆನನ್ ಹಲವು ಬಾರಿ ವಿವಾದಾತ್ಮಕ ತೀರ್ಪು ನೀಡುವ ಮೂಲಕ ಸುದ್ದಿಯಾಗಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಕೂಡ ಇದು ಮುಂದುವರೆದಿತ್ತು. 4ನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅಂಪೈರ್ ಕಾಲೆಳೆದಿದ್ದಾರೆ.
ಅಹಮದಾಬಾದ್ ಟೆಸ್ಟ್‌ನ ಕೊನೆಯ ದಿನ ನಿತಿನ್ ಮೆನನ್ ವಿರುದ್ಧ ವಿರಾಟ್ ಕೊಹ್ಲಿ ವ್ಯಂಗ್ಯ ಮಾಡಿರುವುದು ಸದ್ಯ ಬಾರಿ ವೈರಲ್ ಆಗಿದೆ. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ 35ನೇ ಓವರ್‌ನಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ರಕ್ಷಣಾತ್ಮಕವಾಗಿ ಆಡಲು ಹೋಗಿ ಚೆಂಡು ಪ್ಯಾಡ್‌ಗೆ ಬಿದ್ದಿತು.
ಅಶ್ವಿನ್ ಸೇರಿದಂತೆ ಭಾರತದ ಆಟಗಾರರು ಎಲ್‌ಬಿಡಬ್ಲ್ಯೂ ಔಟ್ ನೀಡುವಂತೆ ಮನವಿ ಮಾಡಿದರು. ಆದರೆ ಅಂಪೈರ್ ನಿತಿನ್ ಮೆನನ್ ನಾಟೌಟ್ ನೀಡಿದರು. ಮೂರನೇ ಅಂಪೈರ್ ಗೆ ಮೇಲ್ಮನವಿ ಸಲ್ಲಿಸಿದರೂ ಆನ್‌ಫೀಲ್ಡ್ ನಾಟೌಟ್ ನೀಡಿದ ಕಾರಣ ಟ್ರಾವಿಸ್ ಹೆಡ್ ಜೀವದಾನ ಪಡೆದರು.
ನಂತರ ತಮ್ಮ ಸ್ಥಾನಕ್ಕೆ ಮರಳಿದ ವಿರಾಟ್ ಕೊಹ್ಲಿ ನಿತಿನ್ ಮೆನನ್ ಬಗ್ಗೆ ವ್ಯಂಗ್ಯವಾಡಿದರು. "ನಾನಾಗಿದ್ರೆ ಔಟ್ ಆಗಿರ್ತಿದ್ದೆ, ನಾನು ಆ ಸ್ಥಾನದಲ್ಲಿದ್ದೆ ಪಕ್ಕಾ ಔಟಾಗಿರ್ತಿದ್ದೆ" ಎಂದು ಹೇಳುವ ಮೂಲಕ ನಿತಿನ್ ಮೆನನ್ ಕಾಲೆಳೆದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ನಿತಿನ್ ಮೆನನ್ ನಗುತ್ತಾ ಹೆಬ್ಬೆರಳು ತೋರಿಸಿದರು.
ನಿತಿನ್ ಮೆನನ್ ವಿರುದ್ಧ ಸಾಕಷ್ಟು ಟೀಕೆ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ನಿತಿನ್ ಮೆನನ್ ಕಳಪೆ ನಿರ್ಧಾರಗಳಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆಯಲ್ಲಿ ನಿತಿನ್ ಮೆನನ್ ಕನಿಷ್ಠ 6 ಬಾರಿ ತಪ್ಪು ನಿರ್ಣಯಗಳನ್ನು ನೀಡಿದ್ದರು.
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ನೀಡಿದ ಎಲ್‌ಬಿಡಬ್ಲ್ಯೂ ಔಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಿತಿನ್ ಮೆನನ್ ವಿರುದ್ಧ ವಿರಾಟ್ ಕೊಹ್ಲಿ ಅಭಿಮಾನಿಗಳು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದರು. ಅದೆಲ್ಲವನ್ನೂ ನೆನಪಿನಲ್ಲಿಟ್ಟುಕೊಂಡಿದ್ದ ವಿರಾಟ್ ಕೊಹ್ಲಿ ನಾಲ್ಕನೇ ಟೆಸ್ಟ್‌ನಲ್ಲಿ ವ್ಯಂಗ್ಯವಾಗಿಯೇ ನಿತಿನ್ ಮೆನನ್‌ರನ್ನು ಟೀಕಿಸಿದ್ದಾರೆ.

ಸರಣಿ ಗೆದ್ದು ಬೀಗಿದ ಭಾರತ
ಅಹಮದಾಬಾದ್‌ನಲ್ಲಿ ನಡೆದ 4ನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಯಿತು. ಎರಡೂ ತಂಡದ ನಾಯಕರು ಪರಸ್ಪರ ಚರ್ಚೆ ಮಾಡಿದ ಬಳಿಕ ಆಟವನ್ನು ನಿಲ್ಲಿಸಲು ನಿರ್ಧರಿಸಿದರು. ಇದರಿಂದ ಡ್ರಾ ಎಂದು ಘೋಷಿಸಲಾಯಿತು. ಈ ಮೂಲಕ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಆಸರೆಯಾದರು. 3 ವರ್ಷದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 186 ರನ್ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದು, ಇಂಗ್ಲೆಂಡ್‌ನ ಓವಲ್‌ನಲ್ಲಿ ಜೂನ್ 7ರಿಂದ ಫೈನಲ್ ಪಂದ್ಯ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications