Virat Kohli: 76 ವರ್ಷಗಳ ಹಿಂದೆ ಡಾನ್ ಬ್ರಾಡ್ಮನ್ ಮಾಡಿದ್ದ ದಾಖಲೆಯೇ ಕೊಹ್ಲಿ ಟಾರ್ಗೆಟ್
ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದು ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಅವರ 10ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಈ ಮೂಲಕ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಈಗಾಗಲೇ ಭಾರತದ ದಿಗ್ಗಜ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದು, ಈಗ ತಮ್ಮ ಗುರಿಯನ್ನು ಡಾನ್ ಬ್ರಾಡ್ಮನ್ ಅವರ ಸಾಧನೆ ಮೇಲೆ ಇಟ್ಟಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಅವರು ಮತ್ತೊಂದು ಶತಕ ಬಾರಿಸಿದರೆ, 76 ವರ್ಷಗಳಿಂದ ಡಾನ್ ಬ್ರಾಡ್ಮನ್ ಹೆಸರಿನಲ್ಲಿರುವ ದಾಖಲೆಯನ್ನು ಮುರಿಯಲಿದ್ದಾರೆ.

ಬ್ರಾಡ್ಮನ್ 1930 ಮತ್ತು 1948 ರ ನಡುವೆ ಇಂಗ್ಲೆಂಡ್‌ನಲ್ಲಿ 11 ಶತಕಗಳನ್ನು ಗಳಿಸಿದ್ದರು. ಈ ಮೂಲಕ ಅವರು ಒಂದು ದೇಶದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಡಾನ್ ಬ್ರಾಡ್ಮನ್ ತಮ್ಮ ವೃತ್ತಿಜೀವನದಲ್ಲಿ ಇಂಗ್ಲೆಂಡ್ ನೆಲದಲ್ಲಿ ಆಡಿದ 19 ಪಂದ್ಯಗಳ 30 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ರಾಡ್ಮನ್ ಅವರ ಗರಿಷ್ಠ ಸ್ಕೋರ್ 334 ಆಗಿತ್ತು. ಇದಲ್ಲದೆ, ಅವರು ಇಂಗ್ಲೆಂಡ್‌ನಲ್ಲಿ ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು 2011 ರಿಂದ ಆಸ್ಟ್ರೇಲಿಯಾದಲ್ಲಿ ಒಟ್ಟು ಮೂರು ಸ್ವರೂಪಗಳಲ್ಲಿ 43 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 2710 ರನ್‌ಗಳನ್ನು ಕಲೆ ಹಾಕಿದ್ದು, 10 ಶತಕಗಳನ್ನು ಸಿಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್‌ನ ಜ್ಯಾಕ್ ಹಾಬ್ಸ್ 9 ಶತಕಗಳನ್ನು ಬಾರಿಸಿದರೆ, ಶ್ರೀಲಂಕಾದಲ್ಲಿ ಸಚಿನ್ ತೆಂಡೂಲ್ಕರ್ ಕೂಡ 9 ಶತಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಈ ಇಬ್ಬರು ದಿಗ್ಗಜ ಬ್ಯಾಟರ್‌ಗಳು ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ 7 ಶತಕಗಳೊಂದಿಗೆ ಸುನಿಲ್ ಗವಾಸ್ಕರ್ ಅವರು ಸರ್ ವಿವಿಯನ್ ರಿಚರ್ಡ್ಸ್ ನಂತರ ಐದನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನಲ್ಲಿ ರಿಚರ್ಡ್ಸ್ 8 ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications