ವಿಶ್ವದ ಎರಡು ಬಲಿಷ್ಠ ಟೆಸ್ಟ್ ತಂಡಗಳಾದ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಮಾದರಿಯ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದು ಕದನ ಕುತೂಹಲ ಕೆರಳಿಸಿದೆ. ಈ ಪಂದ್ಯಕ್ಕಾಗಿ ಎರಡು ತಂಡಗಳು ಕೂಡ ಈಗ ಇಂಗ್ಲೆಂಡ್‌ನಲ್ಲಿ ಸಿದ್ಧತೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಅಪಾಯಕಾರಿಯಾಬಲ್ಲ ಆಟಗಾರ ಯಾರು ಎಂಬುದನ್ನು ಹೆಸರಿಸಿದ್ದಾರೆ.
ಅಂದಹಾಗೆ ಕ್ಯಾಮರೂನ್ ಗ್ರೀನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದು ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ್ದಾರೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಗ್ರೀನ್ ರೋಹಿತ್ ಶರ್ಮಾ ಬದಲಿಗೆ ವಿರಾಟ್ ಕೊಹ್ಲಿಯೇ ತಂಡಕ್ಕೆ ಅಪಾಯಕಾರಿ ಎಂಬುದನ್ನು ನೇರವಾಗಿ ಹೇಳಿದ್ದಾರೆ.

ಕ್ಯಾಮರೂನ್ ಗ್ರೀನ್ ಕಳೆದ ಮಾರ್ಚ್ ಏಪ್ರಿಲ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗ್ರೀನ್ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದರು. ಟೆಸ್ಟ್ ಮಾದರಿಯ ಆ ಫಾರ್ಮನ್ನು ಐಪಿಎಲ್‌ನಲ್ಲಿಯೂ ಮುಂದುವರಿಸಿದ್ದ ಆಸಿಸ್ ಯುವ ಆಟಗಾರ ಟೂರ್ನಿಯಲ್ಲಿ 160.28ರ ಸ್ಟ್ರೈಕ್‌ರೇಟ್‌ನೊಂದಿಗೆ 452 ರನ್‌ಗಳನ್ನು ಗಳಿಸಿದ್ದಾರೆ ಅಲ್ಲದೆ 6 ವಿಕೆಟ್ ಕೂಡ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಪ್ರವೇಶಕ್ಕೆ ನೆರವಾಗಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಿನ್ನೆಲೆಯಲ್ಲಿ ಕ್ಯಾಮರೂನ್ ಗ್ರೀನ್ ಐಸಿಸಿಗೆ ಸಂದರ್ಶನ ನೀಡಿದ್ದು ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ ಅನುಭವ ಹಂಚಿಕೊಂಡಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಆಡಿದ್ದು ಶ್ರೇಷ್ಠ ಅನುಭವ ಎಂದಿರುವ ಅವರು ಮೈದಾನದಲ್ಲಿ ಭಾರತದ ನಾಯಕನ ಶಾಂತ ಮನೋಭಾವವನ್ನು ಪ್ರಶಂಸಿಸಿದ್ದಾರೆ.
ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಯಾರು ಹೆಚ್ಚು ಅಪಾಯಕಾರಯಾಗಬಲ್ಲರು ಎಂಬ ಪ್ರಶ್ನೆ ಬಂದಾಗ ಕ್ಯಾಮರೂನ್ ಗ್ರೀನ್ ವಿರಾಟ್ ಕೊಹ್ಲಿ ಹೆಸರು ಉಲ್ಲೇಖಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಆಡಿದ್ದಾಗ ವಿರಾಟ್ ಕೊಹ್ಲಿ 82 ರನ್‌ಗಳನ್ನು ಬಾರಿಸುವ ಮೂಲಕ ಆರ್‌ಸಿಬಿ ಗೆಲುವಿಗೆ ಕಾರಣವಾಗಿದ್ದರು. ಕೊಹ್ಲಿಯ ಈ ಪ್ರದರ್ಶನ ಆಸಿಸ್ ಆಟಗಾರನ ಮನಗೆದ್ದಿದೆ.
ವಿರಾಟ್ ಕೊಹ್ಲಿ ಮಹತ್ವದ ಘಟ್ಟದಲ್ಲಿ ಯಾವಾಗಲೂ ಮುಂದೆ ನಿಂತು ಆಡುವಂತಾ ಆಟಗಾರ ಎಂದು ಗ್ರೀನ್ ಬಣ್ಣಿಸಿದ್ದು ಆತನ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡಲು ಎದುರುನೋಡುತ್ತಿದ್ದೇನೆ ಎಂದಿದ್ದಾರೆ. "ವಿರಾಟ್ ಕೊಹ್ಲಿ ಮಹತ್ವದ ಪಂದ್ಯಗಳಲ್ಲಿ ಯಾವಾಗಲೂ ಮುಂದೆ ನಿಂತು ಆಡುವ ಆಟಗಾರ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಖಮಡಿತವಾಗಿಯೂ ದೊಡ್ಡ ಕ್ಷಣವಾಗಿದ್ದು ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಆಡಲು ಎದುರುನೋಡುತ್ತಿದ್ದೇನೆ" ಎಂದಿದ್ದಾರೆ ಕ್ಯಾಮರೂನ್ ಗ್ರೀನ್.
ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್ ಟೆಸ್ಟ್‌ನಲ್ಲಿ ಕೊಹ್ಲಿ 364 ಎಸೆತಗಳಲ್ಲಿ 186 ರನ್ ಗಳಿಸುವ ಮೂಲಕ ಟೆಸ್ಟ್ ಮಾದರಿಯಲ್ಲಿ ತಮ್ಮ ಶತಕದ ಬರವನ್ನು ನೀಗಿಸಿದರು. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಯಾವಾಗಲೂ ಅತ್ಯುತ್ತಮ ಪ್ರದರ್ಶನ ನೀಡುವ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್‌ಗಳನ್ನು ಆಡಿದ್ದು 48.26 ಸರಾಸರಿಯಲ್ಲಿ ಎಂಟು ಶತಕಗಳು ಮತ್ತು ಐದು ಅರ್ಧಶತಕಗಳ ನೆರವಿನೊಂದಿಗೆ 1979 ರನ್‌ಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ.