ಇಂಗ್ಲೆಂಡ್‌ನ ಓವಲ್‌ನಲ್ಲಿ ಜೂನ್ 7ರಿಂದ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ.
ಇದೇ ವೇಳೆ ಭಾರತ ತಂಡವು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬೇಕು ಎಂದು ಭಾರತದ ಮಾಜಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪಿಚ್‌ನ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಸಮರ್ಥಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡವು ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಇಬ್ಬರು ಸ್ಪಿನ್ನರ್‌ಗಳಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೂ, ಆ ಪಂದ್ಯವನ್ನು ಭಾರತ ಕಳೆದುಕೊಳ್ಳಬೇಕಾಯಿತು.
ನ್ಯೂಜಿಲೆಂಡ್ ತಂಡ ಐದು ವೇಗಿಗಳೊಂದಿಗೆ ಆಡಿ ವಿಜಯಶಾಲಿಯಾಗಿ ಹೊರಹೊಮ್ಮಿದ ಕಾರಣ, ಭಾರತದ ಸ್ಪಿನ್‌ನ ಪ್ರಭಾವವನ್ನು ಕಡಿಮೆಗೊಳಿಸಿತು. ಲಂಡನ್‌ನಲ್ಲಿ ಬಿಸಿಲಿನ ವಾತಾವರಣವಿರುವುದರಿಂದ, ಹರ್ಭಜನ್ ಸಿಂಗ್ ಸೂಚಿಸಿದಂತೆ ಎಡಗೈ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಆಫ್‌ಸ್ಪಿನ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಇಬ್ಬರನ್ನೂ ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ.
ಹರ್ಭಜನ್ ಸಿಂಗ್ ಪ್ರಕಾರ, "ಇದೆಲ್ಲವೂ ಪಿಚ್ ಏನು ಹೇಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಪಿಚ್‌ನಲ್ಲಿ ಕಡಿಮೆ ಹುಲ್ಲು ಇದ್ದರೆ ಮತ್ತು ಸ್ವಚ್ಚಂದ ಆಕಾಶವಿದ್ದರೆ, ನಂತರ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಟವಾಡಿ. ಒಂದು ವೇಳೆ ಇದು ಆಗದಿದ್ದರೆ ಶಾರ್ದೂಲ್ ಠಾಕೂರ್ ಅವರೊಂದಿಗೆ ಮೂರು ವೇಗಿಗಳು ಮತ್ತು ರವೀಂದ್ರ ಜಡೇಜಾ ಅವರನ್ನು ಆಡಿಸಿ. ಶಾರ್ದೂಲ್ ಠಾಕೂರ್ ಅವರು ಬೌಲಿಂಗ್ ಮಾತ್ರವಲ್ಲದೆ ಬ್ಯಾಟ್‌ನಿಂದಲೂ ಕೊಡುಗೆ ನೀಡುತ್ತಾರೆ," ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಭಾರತ ತಂಡ ಮಾಡಬೇಕಾದ ಇನ್ನೊಂದು ನಿರ್ಧಾರವೆಂದರೆ, ನಿರ್ಣಾಯಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ವಿಕೆಟ್‌ಕೀಪರ್‌ನ ಬಗ್ಗೆ ನಿರ್ಧರಿಸುವುದು. ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಈ ವರ್ಷದ ಆರಂಭದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ 2-1 ಸರಣಿಯ ವಿಜಯೋತ್ಸವದ ಸಂದರ್ಭದಲ್ಲಿ ಕೆಎಸ್ ಭರತ್ ಅವರು ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ನಿರ್ವಹಿಸಿದರು. ಆದರೆ ಇಶಾನ್ ಕಿಶನ್ ಇನ್ನೂ ತಮ್ಮ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿಲ್ಲ.
ಕೆಎಸ್ ಭರತ್ ಈ ಹಿಂದೆ 2018ರಲ್ಲಿ ಭಾರತ ಎ ತಂಡದ ಭಾಗವಾಗಿ ಇಂಗ್ಲೆಂಡ್‌ನಲ್ಲಿ ಆಡಿದ್ದರು ಮತ್ತು ಕಳೆದ ವರ್ಷದ ಪ್ರವಾಸದ ಸಮಯದಲ್ಲಿ ಹಿರಿಯರ ತಂಡದ ಭಾಗವಾಗಿದ್ದರು. ಈ ವೇಳೆ ಅಜೇಯ 70 ರನ್ ಗಳಿಸಿದರು. ಲೀಸೆಸ್ಟರ್‌ಶೈರ್ ವಿರುದ್ಧದ ಪ್ರವಾಸ ಪಂದ್ಯದಲ್ಲಿ ಔಟ್ ಮಾಡಿದ್ದರು.

ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇಶಾನ್ ಕಿಶನ್‌ಗಿಂತ ಕೆಎಸ್ ಭರತ್‌ಗೆ ತಮ್ಮ ಆದ್ಯತೆಯನ್ನು ವ್ಯಕ್ತಪಡಿಸಿದರು. ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ಕೆಎಸ್ ಭರತ್ ಅವರ ಸ್ಥಿರ ಪ್ರದರ್ಶನವನ್ನು ಉಲ್ಲೇಖಿಸಿದರು.
"ಇಶಾನ್ ಕಿಶನ್ ಆಡುವ 11ರ ಬಳಗದಲ್ಲಿ ಇರಬೇಕೆಂದು ನಾನು ಭಾವಿಸುವುದಿಲ್ಲ. ಏಕೆಂದರೆ ಕೆಎಸ್ ಭರತ್ ಕೆಲವು ಸಮಯದಿಂದ ಸ್ಥಿರವಾಗಿ ಆಡುತ್ತಿದ್ದಾರೆ," ಎಂದು ಹರ್ಭಜನ್ ಸಿಂಗ್ ಹೇಳಿದರು.
ವೃದ್ಧಿಮಾನ್ ಸಹಾ ಅಥವಾ ಕೆಎಲ್ ರಾಹುಲ್ ಅವರಂತಹ ಅನುಭವಿ ಆಟಗಾರರು ಲಭ್ಯವಿದ್ದರೆ, ಅವರ ಉತ್ತಮ ಕೌಶಲ್ಯ ಮತ್ತು ವಿಕೆಟ್ ಕೀಪರ್ ಪಾತ್ರದಲ್ಲಿ ಅನುಭವದ ಕಾರಣ ಅವರನ್ನು ಪರಿಗಣಿಸಲಾಗುತ್ತಿತ್ತು ಎಂದು ಹರ್ಭಜನ್ ಸಿಂಗ್ ಉಲ್ಲೇಖಿಸಿದ್ದಾರೆ.
ಕೊನೆಯದಾಗಿ, ಆಸ್ಟ್ರೇಲಿಯಾ ವಿರುದ್ಧದ ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ತಮ್ಮ ಆಡುವ 11ರ ಬಳಗವನ್ನು ಅಂತಿಮಗೊಳಿಸುವ ಮೊದಲು ಭಾರತೀಯ ತಂಡವು ತಮ್ಮ ಆಯ್ಕೆಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಮತ್ತು ಪಿಚ್ ಪರಿಸ್ಥಿತಿಗಳನ್ನು ವಿಶ್ಲೇಷಿಸಬೇಕಾಗುತ್ತದೆ.