
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನ ಸಾಧಾರಣ ಪ್ರದರ್ಶನ ನೀಡಿದೆ. ಚೇತೇಶ್ವರ್ ಪೂಜಾರ ಹಾಗೂ ಶ್ರೇಯಸ್ ಐಯ್ಯರ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸವಾಲಿನ ಮೊತ್ತ ಪೇರಿಸುವತ್ತ ಟೀಮ್ ಇಂಡಿಯಾ ಹೆಜ್ಜೆ ಹಾಕಿದೆ. ಮೊದಲ ದಿನದಾಟದಲ್ಲಿ 90 ರನ್‌ಗಳಿಸಿ ವಿಕಟ್ ಕಳೆದುಕೊಂಡ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಪಂದ್ಯ ನಡೆಯುತ್ತಿರುವ ಚಿತ್ತಗಾಂಗ್ ಮೈದಾನದ ಪಿಚ್ ಬಗ್ಗೆ ಮಾತನಾಡಿದ್ದು ಬ್ಯಾಟಿಂಗ್‌ಗೆ ಬಹಳ ಕಠಿಣವಾಗಿರುವ ಪಿಚ್ ಇದಾಗಿದೆ ಎಂದಿದ್ದಾರೆ.
"ಸದ್ಯ ನಾವು ಡೀಸೆಂಟ್ ರನ್ ಹೊಂದಿದ್ದೇವೆ. ಮೊದಲ ದಿನದಾಟದ ಅಂತ್ಯಕ್ಕೆ ನಾವು ನಾವು ವಿಕೆಟ್‌ಗಳನ್ನು ಕೈಯಲ್ಲಿ ಹೊಂದಿದ್ದೇವೆ. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಇನ್ನಷ್ಟು ಉತ್ತಮ ರನ್‌ಗಳಿಸುವ ಅವಕಾಶವಿದೆ" ಎಂದಿದ್ದಾರೆ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ. ಶ್ರೇಯಸ್ ಐಯ್ಯರ್ ಜೊತೆ ಸೇರಿ 5ನೇ ವಿಕೆಟ್‌ಗೆ 149 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಪೂಜಾರ ಭಾಗಿಯಾಗಿದ್ದರು.
"ಈ ಮೈದಾನದಲ್ಲಿ 350 ರನ್‌ಗಳಿಸಿದರೆ ಡೀಸೆಂಟ್ ಸ್ಕೋರ್ ಎನಿಸಲಿದೆ. ಯಾಕೆಂದರೆ ಇಲ್ಲಿ ಸ್ಪಿನ್ನರ್‌ಗಳಿಗೆ ಪಿಚ್ ಉತ್ತಮವಾಗಿ ನೆರವು ನೀಡುತ್ತಿದೆ. ನಮ್ಮ ತಂಡದಲ್ಲಿ ಮೂವರು ಸ್ಪಿನ್ನರ್‌ಗಳು ಇದ್ದಾರೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ. ಮುಂದುವರಿದು ಮಾತನಾಡಿದ ಅವರು "ಈ ಪಿಚ್‌ನಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಿಲ್ಲ. ಪ್ರತಿ ಓವರ್‌ನಲ್ಲಿಯೂ ಸಾಕಷ್ಟು ಏರಿಳಿತಗಳು ಇರುತ್ತವೆ. ಇದನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ.
ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದ ಮೇಲೆ ಮೊದಲ ದಿನ ಯಶಸ್ಸು ಸಾಧಿಸಿದರು. ಮೊದಲಿಗೆ ಆರಂಭಿಕ ಜೋಡಿಯಾದ ಕೆಎಲ್ ರಾಹುಲ್ ಹಾಗೂ ಶುಬ್ಮನ್ ಗಿಲ್ ಅವರನ್ನು ಬೇರ್ಪಡಿಸುವ ಮೂಲಕ ಬಾಂಗ್ಲಾದೇಶ ತಂಡಕ್ಕೆ ಮೊದಲ ಯಶಸ್ಸು ನೀಡಿದರು. 20 ರನ್‌ಗಳಿಸಿದ ಶುಬ್ಮನ್ ಗಿಲ್ ತೈಜುಲ್ ಇಸ್ಲಾಮ್‌ಗೆ ವಿಕೆಟ್ ನೀಡುವ ಮೂಲಕ ಆಘಾತ ಅನುಭವಿಸಿರು. ಬಳಿಕ ವಿರಾಟ್ ಕೊಹ್ಲಿ ಕೂಡ ತೈಜುಲ್ ಎಸೆತದಲ್ಲಿ ಕೇವಲ 1 ರನ್‌ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ನಂತರ 90 ರನ್‌ಗಳಿಸಿ ಶತಕದತ್ತ ಹೆಚ್ಚೆ ಹಾಕುತ್ತಿದ್ದ ಚೇತೇಶ್ವರ್ ಪೂಜಾರ ಕೂಡ ಬೌಲ್ಡ್ ಆಗಿ ನಿರ್ಗಮಿಸುವ ಮೂಲಕ ತೈಜುಲ್ 3ನೇ ವಿಕೆಟ್ ಸಂಪಾದಿಸಿದರು.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದು ಚೇತೇಶ್ವರ್ ಪೂಜಾರ ಹಾಗೂ ಶ್ರೇಯಸ್ ಐಯ್ಯರ್ ಜೋಡಿ. ಭರ್ಜರಿ ಶತಕದ ಜೊತೆಯಾಟ ನೀಡಿದ ಆ ಆಟಗಾರರು ತಂಡವನ್ನು ಕುಸಿತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಪೂಜಾರ ಶತಕ ವಂಚಿತವಾದರೆ ಶ್ರೇಯಸ್ ಐಯ್ಯರ್ 82 ರನ್‌ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಅಕ್ಷರ್ ಪಟೇಲ್ ದಿನದಾಟದ ಅಂತಿಮ ಎಸೆತದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಬಾಂಗ್ಲಾದೇಶ ಆಡುವ ಬಳಗ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ಮಹಮ್ಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಶೋರಿಫುಲ್ ಇಸ್ಲಾಂ, ಅನಾಮುಲ್ ಹಕ್, ರೆಜೌರ್ ರೆಹಮಾನ್ ರಾಜ
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್,
ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೀಕರ್ ಭರತ್, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್