Ind vs Ban : 3 ವರ್ಷದ ಬಳಿಕ ಶತಕ ಸಿಡಿಸಿದ ಪೂಜಾರ, ಗಿಲ್ ಚೊಚ್ಚಲ ಶತಕ: ಬಾಂಗ್ಲಾ ಗೆಲುವಿಗೆ ದೊಡ್ಡ ಗುರಿ

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿಯೂ ಭಾರತ ಅಮೋಘ ಪ್ರದರ್ಶನ ನೀಡಿದೆ. ಹೀಗಾಗಿ ಬಾಂಗ್ಲಾದೇಶ ತಂಡಕ್ಕೆ 513 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮುನ್ನಡೆ ಪಡೆದ ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಯುವ ಆಟಗಾರ ಶುಬ್ಮನ್ ಗಿಲ್ ಹಾಗೂ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಮೋಘ ಬ್ಯಾಟಿಂಗ್ ನಡೆಸಿ ಇಬ್ಬರು ಕೂಡ ಶತಕದ ಗಡಿ ದಾಟುವಲ್ಲಿ ಯಶಸ್ವಿಯಾದರು. ಈ ಇಬ್ಬರ ಅದ್ಭುತ ಪ್ರದರ್ಶನದಿಂದಾಗಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 258 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಣೆ ಮಾಡಿದೆ. ಈ ಮೂಲಕ ಬಾಂಗ್ಲಾ 500ಕ್ಕೂ ಅಧಿಕ ರನ್‌ಗಳ ಗುರಿ ಪಡೆದುಕೊಂಡಿದೆ.

3 ವರ್ಷಗಳ ಬಳಿಕ ಶತಕ ಸಿಡಿಸಿದ ಪೂಜಾರ
ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್‌ಗಳಿಸಿ ಶತಕ ವಂಚಿತವಾಗಿದ್ದ ಪೂಜಾರ ಎರಡನೇ ಇನ್ನಿಂಗ್ಸ್‌ಲ್ಲಿಯೂ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿದರು. ಈ ಮೂಲಕ ಈ ಪಂದ್ಯದಲ್ಲಿ ಪೂಜಾರ ತಮ್ಮ ಶತಕವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪೂಜಾರ ಬರೊಬ್ಬರಿ ಮೂರು ವರ್ಷಗಳ ಬಳಿಕ ಮೂರಂಕಿಯ ಗಡಿ ದಾಟಿದ್ದಾರೆ. ಈ ಅವಧಿಯಲ್ಲಿ ಕೆಲ ಬಾರಿ ಶತಕದ ಸನಿಹಕ್ಕೆ ಬಂದಿದ್ದರೂ ಶತಕವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದರು. ಕಡೆಗೂ ಪೂಜಾರ 29 ಟೆಸ್ಟ್, 52 ಇನ್ನಿಂಗ್ಸ್ ಹಾಗೂ 47 ತಿಂಗಳುಗಳ ನಂತರ ಶತಕದ ಸಾಧನೆ ಮಾಡಿದ್ದಾರೆ.

ಚೊಚ್ಚಲ ಶತಕ ಸಿಡಿಸಿದ ಶುಬ್ಮನ್ ಗಿಲ್
ಇನ್ನು ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಕೂಡ ಈ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಶತಕ ದಾಖಲಿಸುವಲ್ಲಿ ಶುಬ್ಮನ್ ಗಿಲ್ ಯಶಸ್ವಿಯಾದರು. ಇನ್ನು 2022ರಲ್ಲಿ ಭಾರತದ ಪರವಾಗಿ ಟೆಸ್ಟ್ ಮಾದರಿಯಲ್ಲಿ ಶತಕ ಸಿಡಿಸಿದ ಮೊದಲ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಶುಬ್ಮನ್ ಗಿಲ್ 152 ಎಸೆತಗಳನ್ನು ಎದುರಿಸಿದ್ದು 110 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. 11 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಈ ಇನ್ನಿಂಗ್ಸ್‌ನಲ್ಲಿ ಸೇರಿದ್ದವು.

ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮುನ್ನಡೆ
ಇನ್ನು ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಚೇತೇಶ್ವರ್ ಪೂಜಾರ, ಶ್ರೇಯಸ್ ಐಯ್ಯರ್, ಆರ್ ಅಶ್ವಿನ್, ರಿಷಭ್ ಪಂತ್ ಮೊದಲಾದ ಆಟಗಾರರ ಕೊಡುಗೆಯ ಕಾರಣದಿಂದಾಗಿ ಟೀಮ್ ಇಂಡಿಯಾ 404 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಸ್ಪಿನ್ನರ್ ಕುಲ್‌ದೀಪ್ ಯಾದವ್ ದಾಳಿಗೆ ತತ್ತರಿಸಿ ಕೇವಲ 150 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಈ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಬರೊಬ್ಬರಿ 254 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು.

ಇತ್ತಂಡಗಳ ಆಡುವ ಬಳಗ
ಬಾಂಗ್ಲಾದೇಶ ಆಡುವ ಬಳಗ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ಮಹಮ್ಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಶೋರಿಫುಲ್ ಇಸ್ಲಾಂ, ಅನಾಮುಲ್ ಹಕ್, ರೆಜೌರ್ ರೆಹಮಾನ್ ರಾಜ
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್,
ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೀಕರ್ ಭರತ್, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications