
ಟಿ20 ಮತ್ತು ಏಕದಿನ ಮಾದರಿಯಲ್ಲಿ ಈಗಾಗಲೇ ಫಾರ್ಮ್ ಕಂಡುಕೊಂಡಿರುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೂಡ ಫಾರ್ಮ್‌ಗೆ ಮರಳುವ ವಿಶ್ವಾಸವಿದೆ. 2022ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಬಾಂಗ್ಲಾದೇಶದ ವಿರುದ್ಧ ಫಾರ್ಮ್ ಮರಳಿಪಡೆಯುವ ವಿಶ್ವಾಸದಲ್ಲಿದ್ದಾರೆ.
ಸೋಮವಾರ ಭಾರತ ತಂಡದ ಆಟಗಾರರು ಭಾರಿ ಅಭ್ಯಾಸ ನಡೆಸಿದರು. ರೋಹಿತ್ ಶರ್ಮಾ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಗಾಯಗೊಂಡ ಪರಿಣಾಮ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಕೆಎಲ್ ರಾಹುಲ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಈ ವೇಳೆ ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಈ ವರ್ಷ ಉತ್ತಮ ಫಾರ್ಮ್‌ನಲ್ಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು. ಈ ವರ್ಷ ವಿರಾಟ್ ಕೊಹ್ಲಿ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನಾಡಿಲ್ಲ, ಕೆಲವೇ ಪಂದ್ಯಗಳಲ್ಲಿ ಆಡದ ಮಾತ್ರಕ್ಕೆ ಫಾರ್ಮ್ ಕಳೆದುಕೊಂಡಂತೆ ಎಂದುಕೊಳ್ಳಬಾರದು ಎಂದು ಕೆಎಲ್ ರಾಹುಲ್ ಹೇಳಿದರು.
ಕೊಹ್ಲಿ 2022ರಲ್ಲಿ ಟೆಸ್ಟ್ 4 ಪಂದ್ಯಗಳಲ್ಲಿ 7 ಇನ್ನಿಂಗ್ಸ್‌ಗಳಿಂದ 31.43 ಸರಾಸರಿಯಲ್ಲಿ ಕೇವಲ 220 ರನ್ ಗಳಿಸಿದ್ದಾರೆ. 7 ಇನ್ನಿಂಗ್ಸ್‌ಗಳಿಂದ ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್ ಗಳಿಸಿ ಔಟಾದರು. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲೂ ಅದನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕೂಡ ಫಾರ್ಮ್‌ಗೆ ಮರಳುವ ವಿಶ್ವಾಸ
ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯ ಕಳಪೆ ಫಾರ್ಮ್ ಕಳವಳಕಾರಿಯೇ ಎಂದು ರಾಹುಲ್‌ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
"ಅವರು ಈ ವರ್ಷ ಆಡಿರುವುದು ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಮಾತ್ರ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಅದೇ ಫಾರ್ಮ್ ಮುಂದುವರೆಸುವ ವಿಶ್ವಾಸವಿದೆ" ಎಂದು ಕೆಎಲ್ ರಾಹುಲ್ ಹೇಳಿದರು.
2019ರ ನವೆಂಬರ್ ತಿಂಗಳಿನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಶತಕ ಗಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅದು ಕೊನೆಯ ಶತಕ. ಅದಾದ ನಂತರ ಅವರು ಶತಕ ಗಳಿಸಲು 2022ರ ಏಷ್ಯಾಕಪ್‌ವರೆಗೆ ಹೋರಾಡಿದರು.