ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ನಿಗದಿತ ಸಮಯಕ್ಕಿಂತ ಮುಂಚೆಯೇ ಮುಕ್ತಾಯಗೊಂಡಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಆಟವನ್ನು ನಿಗದಿತ ಸಮಯಕ್ಕಿಂತ 45 ನಿಮಿಷಗಳ ಮೊದಲು ನಿಲ್ಲಿಸಲಾಯಿತು.
ಈ ವೇಳೆ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಎಲ್ಲರ ಗಮನ ಸೆಳೆದರು. ಅವರು ಸ್ಪಿನ್ ಬೌಲಿಂಗ್ ಮಾಡಲು ಮುಂದಾದಾಗ ಅಂಪೈರ್ ಪಂದ್ಯವನ್ನು ನಿಲ್ಲಿಸಿದರು. ಒಂದು ವೇಳೆ ಸಿರಾಜ್ ಅವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರೆ, ಬಹುಶಃ ಸ್ಪಿನ್ ಮೂಲಕ ಸಂಚಲನ ಮೂಡಿಸುತ್ತಿದ್ದರು. ಆದರೆ ಸಿರಾಜ್ ಅವರಿಗೆ ಅವಕಾಶ ನೀಡದೆ ಪಂದ್ಯದ ಮೂರನೇ ದಿನದ ಆಟವನ್ನು ಬೇಗ ಮುಗಿಸಲಾಯಿತು.

ಸಂಜೆ 4.15ರ ಸುಮಾರಿಗೆ ಆಟವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂದು ಅಂಪೈರ್‌ಗಳು ಚರ್ಚಿಸಿ ಇಂದಿನ ಆಟವನ್ನು ಇಲ್ಲಿಗೆ ಕೊನೆಗೊಳಿಸುವಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಸೂಚಿಸಿದರು. ಆಗ ರೋಹಿತ್ ಶರ್ಮಾ, 'ಬೆಳಕು ಕಾಣಿಸುತ್ತಿದ್ದು, ಪಂದ್ಯವನ್ನು ಮುಂದುವರಿಸಬಹುದು. ವೇಗದ ಬೌಲರ್‌ಗಳ ಬದಲಿಗೆ ಸ್ಪಿನ್ನರ್‌ಗಳಿಗೆ ಬೌಲಿಂಗ್ ಮಾಡುವುದನ್ನು ಮುಂದುವರಿಸುವುದಾಗಿ ಅಂಪೈರ್‌ಗೆ ತಿಳಿಸಿದರು.
ಆಗ ಮೊಹಮ್ಮದ್ ಸಿರಾಜ್ ತನ್ನ ಓವರ್‌ನ 2 ಎಸೆತಗಳನ್ನು ಪೂರ್ಣಗೊಳಿಸಿದ್ದರು . ನಾಯಕನ ಮಾತನ್ನು ಕೇಳಿದ ಅವರು ಉಳಿದ ನಾಲ್ಕು ಎಸೆತಗಳನ್ನು ಸ್ಪಿನ್ ಆಗಿ ಬೌಲ್ ಮಾಡಲು ರೆಡಿಯಾಗುತ್ತಿದ್ದರು. ಆದರೆ ಅಂಪೈರ್ ಪಂದ್ಯ ನಿಲ್ಲಿಸುವಂತೆ ಮನವಿ ಮಾಡಿದರು. ಇದರಿಂದಾಗಿ ಪಂದ್ಯ 45 ನಿಮಿಷ ಮುಂಚಿತವಾಗಿ ಮುಕ್ತಾಯಗೊಂಡಿತು.
ಸಂಜೆ 4.15ರ ಸುಮಾರಿಗೆ ಪಂದ್ಯ ನಡೆಯುತ್ತಿದ್ದಾಗ ಮೈದಾನದ ಸುತ್ತಲೂ ಮೋಡ ಕವಿದಿತ್ತು. ಪರಿಣಾಮ ಪಂದ್ಯವನ್ನು ಮುಂದುವರೆಸಲು ಬೆಳಕಿನ ಕೊರತೆ ಉಂಟುಯಾಯಿತು. ಕೂಡಲೇ ಮೈದಾನದ ದೀಪಗಳನ್ನು ಬೆಳಗಿಸುವಂತೆ ಸೂಚನೆ ನೀಡಲಾಯಿತು. ಆದರೆ ಆ ದೀಪಗಳ ಸಮಸ್ಯೆಯೂ ಇತ್ತು. ಹೀಗಾಗಿ ಸಿರಾಜ್ ಸ್ಪಿನ್ ಬೌಲಿಂಗ್ ಮಾಡಲು ಮುಂದಾದಾಗ ಪಂದ್ಯವನ್ನು ನಿಲ್ಲಿಸಲಾಯಿತು.
ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಭಾರತ ಬೃಹತ್ ಗುರಿ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆರ್ ಅಶ್ವಿನ್ ಶತಕ, ರವೀಂದ್ರ ಜಡೇಜಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕ ಗಳಿಸಿದರು. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಮತ್ತು ರಿಷಬ್ ಪಂತ್ ಅವರ ಮಿಂಚಿನ ಶತಕದ ನೆರವಿನಿಂದ ಟೀಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಇದರೊಂದಿಗೆ ರೋಹಿತ್ ಪಡೆ 515 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು.
ಈಗ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 357 ರನ್‌ಗಳ ಮುನ್ನಡೆ ಸಾಧಿಸಿದೆ. ಬಾಂಗ್ಲಾದೇಶ ಪರ ನಾಯಕ ನಜ್ಮುಲ್ ಹುಸೇನ್ ಶಾಂಟೊ (51) ಮತ್ತು ಶಕೀಬ್ ಅಲ್ ಹಸನ್ (5) ಅಜೇಯರಾಗಿ ಉಳಿದಿದ್ದಾರೆ. ಮೊದಲ ಟೆಸ್ಟ್ ಗೆಲ್ಲಲು ಭಾರತಕ್ಕೆ 6 ವಿಕೆಟ್ ಗಳ ಅವಶ್ಯಕತೆ ಇದ್ದು, ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದೆ.