ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಬಾಂಗ್ಲಾದೇಶದ ವಿರುದ್ಧ ಭರವಸೆ ಮೂಡಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ರನ್‌ಗಳ ಮಹಲ್ ಕಟ್ಟುತ್ತಿರುವ ಯಶಸ್ವಿ ಜೈಸ್ವಾಲ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಒತ್ತಡದಲ್ಲಿದ್ದ ತಂಡಕ್ಕೆ ಆಧಾರವಾದ ಯಶಸ್ವಿ ಅಬ್ಬರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಈ ವರ್ಷದಲ್ಲಿ ನಿರ್ಮಿಸಿರುವ ಯಶಸ್ವಿ, ಮತ್ತೊಂದು ಮೈಲಿಗಲ್ಲು ಮುಟ್ಟಿದರು.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಟೀಮ್ ಇಂಡಿಯಾಕ್ಕೆ ಆಧಾರವಾಗಿದ್ದ ಯುವ ಆಟಗಾರ, ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲೂ ತಂಡಕ್ಕೆ ನೆರವಾದರು. ಮೊದಲ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದರು. ಈ ಮೂಲಕ ತಮ್ಮ ಆಯ್ಕೆಯನ್ನು 22 ವರ್ಷದ ಯುವ ಬ್ಯಾಟರ್ ಸಮರ್ಥಿಸಿಕೊಂಡಿದ್ದಾರೆ.

ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಇಡೀ ವಿಶ್ವಕ್ಕೆ ತೋರಿಸಿದರು. ಈ ಪಿಚ್‌ನಲ್ಲಿ ಸ್ಟಾರ್ ಬ್ಯಾಟರ್‌ಗಳು ಈ ಪಿಚ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದಾಗ ಯಶಸ್ವಿ ಜೈಸ್ವಾಲ್ ಅವರು ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಒಂದು ಬದಿಯನ್ನು ಕಾಯ್ದುಕೊಂಡು ಬ್ಯಾಟ್ ಮಾಡಿದ ಯಶಸ್ವಿ ಜೈಸ್ವಾಲ್, ವಿಭಿನ್ನ ಪರಿಸ್ಥಿತಿಯಲ್ಲಿ ಬ್ಯಾಟ್ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟರು.
ಜೈಸ್ವಾಲ್ 95 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ 5 ನೇ ಅರ್ಧಶತಕ ಬಾರಿಸಿದ್ದಾರೆ. ಇದಲ್ಲದೇ ಜೈಸ್ವಾಲ್ 3 ಶತಕ ಸಿಡಿಸಿದ್ದಾರೆ. ಯಶಸ್ವಿ ಅವರ 56 ರನ್‌ಗಳ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಸೇರಿವೆ. 42ನೇ ಓವರ್ ನ ನಾಲ್ಕನೇ ಎಸೆತದಲ್ಲಿ ನಹಿದ್ ರಾಣಾ, ಯಶಸ್ವಿ ಅವರಿಗೆ ಖೆಡ್ಡಾ ತೋಡುವಲ್ಲಿ ಸಫಲರಾದರು. ಗಂಟೆಗೆ 148 ಕಿಮೀ ವೇಗದ ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ಔಟ್ ಆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಶತಕದ ಕನಸು ನುಚ್ಚೂನೂರಾಯಿತು.
34 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂಥ್ ಆಧಾರವಾದರು. ಈ ಜೋಡಿ ಎಚ್ಚರಿಕೆಯಿಂದ ಬ್ಯಾಟ್ ಮಾಡಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಸಾಗಿತು. ಸುಮಾರು 17 ಓವರ್‌ಗಳ ವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡ ಈ ಜೋಡಿ ರನ್‌ಗಳನ್ನು ಕಲೆ ಹಾಕಿತು. ನಾಲ್ಕನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಜೋಡಿ 66 ರನ್ ಗಳ ಕಾಣಿಕೆ ನೀಡಿದರು.

ಇನ್ನು ರಿಷಭ್ ಪಂತ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಕನ್ನಡಿಗ ಕೆಎಲ್ ರಾಹುಲ್ ಅವರೊಂದಿಗೂ ಯಶಸ್ವಿ ಜೈಸ್ವಾಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಪಿಚ್ ಮರ್ಮ ಅರಿತು ಆಡಿದ ಜೋಡಿ ಬಾಂಗ್ಲಾ ಬೌಲರ್‌ಗಳನ್ನು ಕಾಡಿತು. ಈ ಜೋಡಿ ಸಹ 98 ಎಸೆತಗಳಲ್ಲಿ 48 ರನ್ ಮಾಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಈ ಮೂಲಕ ಯಶಸ್ವಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.