ಇಂಗ್ಲೆಂಡ್ ಟೆಸ್ಟ್ ಶೈಲಿ ಬಗ್ಗೆ ರಾಹುಲ್ ಪ್ರಶಂಸೆ: ಭಾರತದಿಂದಲೂ ಆಕ್ರಮಣಕಾರಿ ಆಟದ ಬಗ್ಗೆ ಸುಳಿವು!

ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಬುಧವಾರದಿಂದ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದು ಖಾಯಂ ನಾಯಕ ರೋಹಿತ್ ಶರ್ಮಾ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಈ ಟೆಸ್ಟ್ ಸರಣಿಗೂ ಮುನ್ನ ಮಾತನಾಡಿದ ಕೆಎಲ್ ರಾಹುಲ್ ಇಂಗ್ಲೆಂಡ್ ತಂಡದ ಟೆಸ್ಟ್ ಆಟದ ಶೈಲಿಯ ಬಗ್ಗೆ ಮಾತನಾಡಿದ್ದಾರೆ. ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದ ಚುಕ್ಕಾಣಿ ಹಿಡಿದ ಬಳಿಕ ಹಾಗೂ ಮೆಕ್ಕಲಮ್ ಕೋಚ್ ಆಗಿ ನೇಮಕವಾದ ಬಳಿಕ ಇಂಗ್ಲೆಂಡ ಟೆಸ್ಟ್ ಮಾದರಿಯಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್‌ನಲ್ಲಿ ಎದುರಾಳಿಯ ಬ್ಯಾಟಿಂಗ್ ಬಲವನ್ನು ಲೆಕ್ಕಿಸದೆ ಸ್ಪೋಟಕ ಪ್ರದರ್ಶನ ನೀಡುತ್ತಿದೆ. ಇದರಲ್ಲಿ ಯಶಸ್ಸನ್ನು ಕೂಡ ಸಾಧಿಸುತ್ತಿದೆ.

ಇಂಗ್ಲೆಂಡ್ ಆಟದ ವಿಧಾನವನ್ನು ಪ್ರಶಂಸಿಸಿದ ರಾಹುಲ್
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಮೈಗೂಡಿಸಿಕೊಂಡಿರುವ ಹೊಸ ವಿಧಾನವನ್ನು ರಾಹುಲ್ ಮುಕ್ತಕಂಠದಿಂದ ಹೊರಗಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಆಡುವ ಆಕ್ರಮಣಕಾರಿ ಆಟವನ್ನು ನೋಡಲು ಆನಂದವಾಗುತ್ತದೆ ಎಂದಿದ್ದಾರೆ ರಾಹುಲ್. ಇದೇ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಟೆಸ್ಟ್ ಸರಣಿಯನ್ನು ವೀಕ್ಷಿಸಿರುವುದಾಗಿಯೂ ಹೇಳಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ತಂಡ ಯಾರೂ ಕೂಡ ಆರಿಸಿಕೊಳ್ಳದ ಹಾದಿಯಲ್ಲಿ ಟೆಸ್ಟ್ ಮಾದರಿಯಲ್ಲಿ ಆಡುತ್ತಿದ್ದಾರೆ ಎಂದಿದ್ದಾರೆ ರಾಹುಲ್.

ಎರಡನೇ ಮುಲ್ತಾನ್ ಟೆಸ್ಟ್‌ನಲ್ಲಿಯೂ ಇಂಗ್ಲೆಂಡ್‌ಗೆ ರೋಚಕ ಜಯ
ಇಂಗ್ಲೆಂಡ್ ತಂಡ 17 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮ ಇನ್ನಿಂಗ್ಸ್‌ನಲ್ಲಿ ಗೆಲುವಿಗಾಗಿ 354 ರನ್‌ಗಳ ಗುರಿ ಪಡೆದುಕೊಂಡಿದ್ದ ಪಾಕಿಸ್ತಾನ ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ಬಾಬರ್ ಅಜಂ ಪಡೆ ನಿರಾಸೆ ಅನುಭವಿಸಿದೆ. 328 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ ತಂಡ 26 ರನ್‌ಗಳ ಅಲ್ಪ ಅಂತರದಿಂದ ಸೋಲು ಅನುಭವಿಸಿದೆ. ಇನ್ನು ಈ ಗೆಲುವಿನಿಂದಿಗೆ ಇಂಗ್ಲೆಂಡ್ ಐತಿಹಾಸಿಕ ಟೆಸ್ಟ್ ಸರನಿ ಗೆಲುವು ಸಾಧಿಸಿದೆ.

ನೋಡಲು ನಿಜಕ್ಕೂ ಆನಂದವಾಗುತ್ತದೆ
ಇಂಗ್ಲೆಂಡ್ ಟೆಸ್ಟ್ ಆಟದ ಶೈಲಿಯ ಬಗ್ಗೆ ಕೆಎಲ್ ರಾಹುಲ್ ಸೋಮವಾರ ಮಾತನಾಡಿದ್ದಾರೆ. "ಈ ರೀತಿ ಆಡುವುದನ್ನು ನೋಡಲು ನಿಜಕ್ಕೂ ಆನಂದವಾಗುತ್ತದೆ. ಈ ಎರಡು ಪಂದ್ಯಗಳನ್ನು ಕೂಡ ನಾನು ನೋಡಿದ್ದೇನೆ. ನಿಜಕ್ಕೂ ಇದು ಉತ್ಸುಕತೆಯಿಂದ ಕೂಡಿದೆ. ಈ ರೀತಿ ಟೆಸ್ಟ್ ಆಡುವುದನ್ನು ನೋಡಲು ಬಹಳ ಖುಷಿಯಾಗುತ್ತದೆ. ಬಹಳ ನಿರ್ಭೀತ ಹಾಗೂ ಆಕ್ರಮಣಕಾರಿ ಆಟವನ್ನು ಆಡಿಕೊಂಡೇ ಪಂದ್ಯವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಆ ಪ್ರದರ್ಶನ ಅವರಿಗೆ ನೆರವಾಗಿದೆ. ಪ್ರತಿ ತಂಡಕ್ಕೂ ತನ್ನದೇ ಆದ ರೀತಿಯಲ್ಲಿ ಆಡುತ್ತದೆ. ಇಂಥಾ ಸಂದರ್ಭದಲ್ಲಿ ಅವುಗಳಿಂದ ಒಂದೆರಡು ಉತ್ತಮ ಅಂಶಗಳನ್ನು ಪ್ರತಿ ತಮಡಗಳು ಕೂಡ ಅಳವಡಿಸಿಕೊಳ್ಳಬಹುದು" ಎಂದು ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್ ಹೇಳಿಕೆ ನೀಡಿದ್ದಾರೆ.

ಭಾರತದಿಂದಲೂ ಆಕ್ರಮಣಕಾರಿ ಪ್ರದರ್ಶನದ ಬಗ್ಗೆ ರಾಹುಲ್ ಸುಳಿವು
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದಿಂದ ಕೂಡ ಆಕ್ರಮಣಕಾರಿ ಪ್ರದರ್ಶನವನ್ನು ನಿರೀಕ್ಷೆ ಮಾಡಬಹುದು ಎಂದಿದ್ದಾರೆ ಕೆಎಲ್ ರಾಹುಲ್. ಇದೇ ಸಂದರ್ಭದಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೇರಲು ಬೇಕಾದ ಅಗತ್ಯಗಳ ಬಗ್ಗೆಯೂ ಅರಿವಿದೆ ಎಂದಿದ್ದಾರೆ. "ನೀವು ಯಾವಾಗಲೂ ಒಂದೇ ವಿಧಾನದಲ್ಲಿ ಆಡಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ನೋಡಿಕೊಂಡು ಆಟವನ್ನು ಆಡಬೇಕಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೇರುವ ಗುರಿ ಕೂಡ ನಮ್ಮ ಮುಂದಿದೆ. ನಾವು ಆಕ್ರಮಣಕಾರಿಯಾಗಿಯೂ ಆಡಲು ಬಯಸುತ್ತೇವೆ. ಈಗ ನಾವು ಎಲ್ಲಿದ್ದೇವೆ ಹಾಘೂ ಫೈನಲ್ ಹಂತಕ್ಕೇರಬೇಕಾದರೆ ಏನು ಮಾಡಬೇಕಿದೆ ಎಂಬುದು ನಮಗೆ ತಿಳಿದಿದೆ. ಹಾಗಾಗಿ ಆಯಾ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಆಡುತ್ತೇವೆ" ಎಂದಿದ್ದಾರೆ ಕೆಎಲ್ ರಾಹುಲ್.

ಭಾರತದ ಮುಂದಿದೆ ಕಠಿಣ ಹಾದಿ
ಇನ್ನು ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೇರಲು ಮುಂದಿನ ಪ್ರತಿಯೊಂದು ಟೆಸ್ಟ್ ಪಂದ್ಯಗಳೂ ಕೂಡ ಬಹಳ ಮುಖ್ಯವಾಗಿದೆ. ಟೀಮ್ ಇಂಡಿಯಾಗೆ 6 ಟೆಸ್ಟ್ ಪಂದ್ಯಗಳು ಮಾತ್ರವೇ ಬಾಕಿಯಿದ್ದು ಇದರಲ್ಲಿ ಕನಿಷ್ಠ ಐದು ಪಂದ್ಯಗಳಲ್ಲಿ ಭಾರತ ಗೆದ್ದರೆ ಫೈನಲ್ ಹಂತಕ್ಕೆ ಪ್ರವೇಶ ಪಡೆಯಲಿದೆ. ಎರಡು ಟೆಸ್ಟ್ ಪಂದ್ಯಗಳು ಬಾಂಗ್ಲಾದೇಶದ ವಿರುದ್ಧ ನಡೆದರೆ ಉಳಿದ ನಾಲ್ಕು ಟೆಸ್ಟ್ ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧ ಭಾರತದ ನೆಲದಲ್ಲಿಯೇ ಟೀಮ್ ಇಂಡಿಯಾ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications