ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ರೋಚಕ ಅಂತ್ಯ ಕಂಡಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಈಗ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯನ್ನು ಗೆಲ್ಲಲು ಸೂರ್ಯಕುಮಾರ್ ಯಾವದ್ ಪಡೆ ಸಜ್ಜಾಗುತ್ತಿದೆ.
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ ತಂಡದಲ್ಲಿ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವುದು ನಾಯಕ ಸೂರ್ಯಕುಮಾರ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರಿಗೆ ಸವಾಲಾಗಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಈ ಸರಣಿಯಲ್ಲಿ ಆಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಿಸಿಸಿಐ ಯುವ ಬೌಲರ್‌ಗಳಾದ ಮಯಾಂಕ್ ಯಾದವ್ ಮತ್ತು ಹರ್ಷಿತ್ ರಾಣಾ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ.

ಬಾಂಗ್ಲಾದೇಶ ತಂಡವನ್ನು ಎದುರಿಸಲು ತವರಿನಲ್ಲಿ ಯಂಗ್ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಈ ಸರಣಿಯಲ್ಲಿ ಮಯಾಂಕ್ ಯಾದವ್ ಅಥವಾ ಹರ್ಷಿತ್ ರಾಣಾ ಇಬ್ಬರಲ್ಲಿ ಒಬ್ಬರಿಗೆ ಆಡುವ ಅವಕಾಶ ಸಿಗಲಿದೆ. ಸೂರ್ಯಕುಮಾರ್ ಯಾದವ್ ನಿರ್ಧಾರದ ಮೇಲೆ ಕುತೂಹಲ ಹೆಚ್ಚಿಸಿದೆ.
ಐಪಿಎಲ್‌ನಲ್ಲಿ ಒಂದೆಡೆ ಹರ್ಷಿತ್ ರಾಣಾ ಡೆತ್ ಓವರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೆ, ಮತ್ತೊಂದೆಡೆ ಮಯಾಂಕ್ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಅತಿವೇಗದ ಬೌಲಿಂಗ್ ಮೂಲಕ ದಾಖಲೆ ಸೃಷ್ಟಿಸಿದ್ದರು. ಈ ಇಬ್ಬರ ಪ್ರದರ್ಶನದ ಮೇಲೆ ಯಾರಿಗೆ ಅವಕಾಶ ನೀಡಬೇಕು ಎಂಬುದು ಚರ್ಚೆ ಆಗುತ್ತಿದೆ. ಈ ಇಬ್ಬರೂ ಕೂಡ ಟೀಮ್ ಇಂಡಿಯಾಕ್ಕೆ ಭವಿಷ್ಯದಲ್ಲಿ ಪ್ರಮುಖ ಬೌಲರ್‌ಗಳಾಗುವ ಎಲ್ಲಾ ಸಾಧ್ಯತೆಗಳಿವೆ.
ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಮಯಾಂಕ್ ಮೊದಲೆರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಅವರ ಪ್ರವೇಶದ ಬಗ್ಗೆ ಚರ್ಚೆಗಳು ನಡೆದಿದ್ದವು. ಐಪಿಎಲ್‌ನಲ್ಲಿ ಮಾಯಾಂಕ್ ಕೇವಲ 4 ಪಂದ್ಯಗಳನ್ನು ಆಡಿದ್ದು, ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದ್ದರು. ಇದಾದ ಬಳಿಕ ಟೂರ್ನಿಯ ವೇಳೆ ಗಾಯಗೊಂಡ ಅವರು ಪಂದ್ಯದಿಂದ ಹೊರಗುಳಿದಿದ್ದರು. ಈಗ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿದ್ದು, ಪಾದರ್ಪಾಣೆ ಮಾಡುವ ಅವಕಾಶವನ್ನು ಹೊಂದಿದ್ದಾರೆ.
ಇನ್ನೊಂದೆಡೆ 2024ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಲು ಹರ್ಷಿತ್ ರಾಣಾ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಐಪಿಎಲ್ 2024 ರಲ್ಲಿ ಹರ್ಷಿತ್ ರಾಣಾ 9.08ರ ಎಕಾನಮಿಯಲ್ಲಿ 13 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಮಿಂಚಿದ್ದರು. ಈ ಪ್ರದರ್ಶನ ಆಧಾರದ ಮೇಲೆ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಅವರನ್ನು ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ. ಬಹಳ ದಿನಗಳಿಂದ ಟೀಮ್ ಇಂಡಿಯಾ ಪರ ಆಡುವ ಕನಸು ಕಾಣುತ್ತಿರುವ ಹರ್ಷಿತ್ ರಾಣಾ ಅವರಿಗೂ ಅವಕಾಶ ಸಿಗುವ ಸಾಧ್ಯತೆಯಿದೆ.