ಬಾಂಗ್ಲಾದೇಶವನ್ನು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದಿಂದ ಸೋಲಿಸುವ ಮೂಲಕ ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ತಂಡ ಮತ್ತೊಮ್ಮೆ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಹೈದರಾಬಾದ್ ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತ 133 ರನ್ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸರಣಿ ವಶಪಡಿಸಿಕೊಂಡಿದೆ.
ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 297 ರನ್ ಗಳಿಸಿತು. ಭಾರತ ನೀಡಿದ 298 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್ ವಿಭಾಗದಲ್ಲೂ ಮಿಂಚಿನ ಪ್ರದರ್ಶನ ನೀಡಿತ್ತು. ಈ ಪಂದ್ಯದಲ್ಲಿ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಅದ್ಭುತ ದಾಖಲೆ ಸೃಷ್ಟಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ಅಬ್ಬರಿಸಿದರು. ನಂತರ, ಬೌಲರ್‌ಗಳ ಸರದಿ ಬಂದಾಗ, ಅವರೂ ಬಾಂಗ್ಲಾದೇಶ ಬ್ಯಾಟರ್‌ಗಳಿಗೆ ರನ್ ಗಳಿಸಲು ಅವಕಾಶವನ್ನೇ ನೀಡಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಮೊದಲ ಓವರ್ ಬೌಲ್ ಮಾಡಲು ಚೆಂಡನ್ನು ಮಯಾಂಕ್‌ಗೆ ನೀಡಿದರು. ನಾಯಕ ನಿರೀಕ್ಷೆಯನ್ನು ಮೀರಿ ಮಾಯಂಕ್ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆಯುವ ಮೂಲಕ ಸಂಚಲನ ಮೂಡಿಸಿದರು.
ಮಯಾಂಕ್ ಮೊದಲ ಎಸೆತದಲ್ಲಿ ಬಾಂಗ್ಲಾದೇಶದ ಆರಂಭಿಕ ಪರ್ವೇಜ್ ಹೊಸೈನ್ ಎಮಾನ್ ಅವರನ್ನು ಔಟ್ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದರು. ಭಾರತದ ಪರ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಎನಿಸಿಕೊಂಡರು. ಈ ಸಾಧನೆ ಮೂಲಕ ಅವರು, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಅವರ ಕ್ಲಬ್ ಸೇರಿದರು. ಭುವನೇಶ್ವರ್ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಮಯಾಂಕ್ 4 ಓವರ್ ಬೌಲಿಂಗ್ ಮಾಡಿದರು. ಈ ವೇಳೆ ಅವರು 32 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಪರ್ವೇಜ್ ಹೊರತುಪಡಿಸಿ, ಅನುಭವಿ ಮಹಮ್ಮದುಲ್ಲಾ ಅವರನ್ನು ಮಯಾಂಕ್ ಔಟ್ ಮಾಡಿದರು. ಇದು ಮಹಮ್ಮದುಲ್ಲಾ ವೃತ್ತಿಜೀವನದ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಮಹಮ್ಮದುಲ್ಲಾ ತನ್ನ ಕೊನೆ ಪಂದ್ಯದಲ್ಲಿ ಕೇವಲ 9 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು.
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ಮಯಾಂಕ್ ಯಾದವ್ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಮಯಾಂಕ್ ನಿರಂತರವಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಅವರ ವೇಗದ ಮುಂದೆ ಬಾಂಗ್ಲಾದೇಶದ ಬ್ಯಾಟರ್‌ಗಳು ತತ್ತರಿಸಿ ಹೋಗಿದ್ದಾರೆ.