
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು ಭಾರತ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ದಾಳಿಗೆ ಸಂಪೂರ್ಣ ನಲುಗಿರುವ ಇಂಗ್ಲೆಂಡ್ ತಂಡ 110 ರನ್‌ಗಳಿಗೆ ಆಲೌಟ್ ಆಗಿದೆ. ಅದರಲ್ಲೂ ಜಸ್ಪ್ರೀತ್ ಬೂಮ್ರಾ ಬರೊಬ್ಬರಿ ಆರು ಆಟಗಾರಿಗೆ ಫೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ ಯಾರೂ ನಿರೀಕ್ಷಿಸದಂತೆ ವೈಫಲ್ಯ ಅನುಭವಿಸಿದೆ.
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕನ ನಿರ್ಧಾರವನ್ನು ಆರಂಭದಿಂದಲೇ ಭಾರತೀಯ ಬೌಲರ್‌ಗಳು ಸಮರ್ಥಿಸಿಕೊಂಡರು. ಇಂಗ್ಲೆಂಡ್‌ನ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗದಂತೆ ಮಾಡಿದರು. ಅದರಲ್ಲೂ ಇಂಗ್ಲೆಂಡ್‌ನ ಅಗ್ರ ಆರು ಬ್ಯಾಟರ್‌ಗಳ ಪೈಕಿ ನಾಲ್ಕು ಮಂದಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ.
ಬೂಮ್ರಾಗೆ ಆರು ವಿಕೆಟ್ ಗೊಂಚಲು: ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ತನ್ನ ಮೊದಲ ಓವರ್‌ನಿಂದಲೇ ಆರ್ಭಟಿಸಲು ಆರಂಭಿಸಿದ್ದರು. ತನ್ನ ಪ್ರಥಮ ಓವರ್‌ನಲ್ಲಿ ಜೇಶನ್ ರಾಯ್ ಹಾಗೂ ಜೋ ರುಟ್ ಇಬ್ಬರನ್ನು ಕೂಡ ಬೂಮ್ರಾ ಔಟ್ ಮಾಡಿದ್ದರು. ಈ ಇಬ್ಬರು ಕೂಡ ಶೂನ್ಯ ಸುತ್ತಿದ್ದಾರೆ. ಬಳಿಕ 7 ರನ್‌ಗಳಿಸಿದ್ದ ಬೈರ್‌ಸ್ಟೋವ್ ಕೂಡ ಬೂಮ್ರಾ ದಾಳಿಗೆ ಬಲಿಯಾದರು. ನಂತರ ಲಿಯಾಮ್ ಲಿವಿಂಗ್‌ಸ್ಟನ್ ಕೂಡ ಸೊನ್ನೆ ಸುತ್ತಿ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಡೇವೊಡ್ ವಿಲ್ಲಿ ಹಾಗೂ ಬ್ರಿಡನ್ ಕೇರ್ಸ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಇನ್ನು ಟೀಮ್ ಇಂಡಿಯಾದ ಮತ್ತೋರ್ವ ವೇಗೊ ಮೊಹಮ್ಮದ್ ಶಮಿ ಬೂಮ್ರಾಗೆ ಅದ್ಭುತವಾಗಿ ಸಾಥ್ ನೀಡಿದ್ದಾರೆ. ಶಮಿ ಕೂಡ ಈ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತು ಸಂಭ್ರಮಿಸಿದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 150 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಹೊಂದಿದ್ದ ಅಜಿತ್ ಅಗರ್ಕರ್ ಅವರನ್ನು ಶಮಿ ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್ ಆಡುವ ಬಳಗ :ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ, ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರೇಗ್ ಓವರ್‌ಟನ್, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸೆ, ರೀಸ್ ಟೋಪ್ಲಿ
ಬೆಂಚ್: ಮ್ಯಾಥ್ಯೂ ಪಾರ್ಕಿನ್ಸನ್, ಸ್ಯಾಮ್ ಕುರಾನ್, ಫಿಲಿಪ್ ಸಾಲ್ಟ್, ಹ್ಯಾರಿ ಬ್ರೂಕ್
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ
ಬೆಂಚ್: ಅಕ್ಷರ್ ಪಟೇಲ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ವಿರಾಟ್ ಕೊಹ್ಲಿ, ಶಾರ್ದೂಲ್ ಠಾಕೂರ್