IND vs ENG 2ನೇ ಟಿ20: ಸಂಭಾವ್ಯ ಆಡುವ ಬಳಗ ಮತ್ತು ಎಡ್ಜ್‌ಬಾಸ್ಟನ್ ಕ್ರೀಡಾಂಗಣದ ಪಂದ್ಯಗಳ ಫಲಿತಾಂಶ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟ್ವೆಂಟಿ ಸರಣಿಯ ದ್ವಿತೀಯ ಪಂದ್ಯ ನಾಳೆ ( ಜುಲೈ 9 ) ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಇದೇ ಕ್ರೀಡಾಂಗಣದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಕಳೆದ ವರ್ಷದಿಂದ ಮುಂದೂಡಲ್ಪಟ್ಟ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು ಹಾಗೂ ಈ ಪಂದ್ಯದಲ್ಲಿ ಇಂಗ್ಲೆಂಡ್ ಟೀಮ್ ಇಂಡಿಯಾಗೆ ಸೋಲುಣಿಸಿತು.
ನಂತರ ಏಜೀಸ್ ಬೌಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 50 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ 1-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದ್ದು, ಟೆಸ್ಟ್ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿದೆ ಹಾಗೂ ಇದೀಗ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಕಣ್ಣಿಟ್ಟಿದೆ.
ಆದರೆ ಟೀಮ್ ಇಂಡಿಯಾಗೆ ಈ ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ದುರಾದೃಷ್ಟದ ತಾಣವಾಗಿ ಪರಿಣಮಿಸಿದ್ದು, ಇಲ್ಲಿ ನಡೆದಿರುವ ಯಾವುದೇ ಟೆಸ್ಟ್ ಹಾಗೂ ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆಲುವು ಸಾಧಿಸಲಾಗದೆ ಹಿನ್ನಡೆ ಅನುಭವಿಸಿದೆ. ಹೌದು, ಈ ಬಾರಿಯ ಟೆಸ್ಟ್ ಪಂದ್ಯವೂ ಸೇರಿದಂತೆ ಈ ಕ್ರೀಡಾಂಗಣದಲ್ಲಿ ಒಟ್ಟು 8 ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಆಡಿದ್ದು, 1 ಪಂದ್ಯ ಡ್ರಾ ಆಗಿದ್ದು, ಉಳಿದ 7 ಪಂದ್ಯಗಳಲ್ಲಿ ಸೋತಿದೆ ಹಾಗೂ 1 ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಆ ಪಂದ್ಯವನ್ನು ಕೂಡ ಸೋತಿದೆ. ಆದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತವಾಗಿ 13 ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದಿದ್ದು, ಈ ಪಂದ್ಯದಲ್ಲಿಯೂ ಗೆಲ್ಲುವ ಫೇವರಿಟ್ ಆಗಿದೆ. ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಪ್ರಥಮ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಇನ್ನೊಂದಿಷ್ಟು ಆಟಗಾರರು ಕಣಕ್ಕಿಳಿಯಲಿದ್ದು, ಸಂಭಾವ್ಯ ಆಡುವ ಬಳಗದ ಮಾಹಿತಿ ಮುಂದೆ ಇದೆ ಓದಿ.

ಭಾರತ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಪ್ರಿತ್ ಬುಮ್ರಾ, ಯುಜ್ವೇಂದ್ರ ಚಹಾಲ್

ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ
ಜೇಸನ್ ರಾಯ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಡೇವಿಡ್ ಮಲನ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಸ್ಯಾಮ್ ಕುರಾನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ರೀಸ್ ಟೋಪ್ಲಿ, ಮ್ಯಾಥ್ಯೂ ಪಾರ್ಕಿನ್ಸನ್

ಭಾರತ vs ಇಂಗ್ಲೆಂಡ್ ಎಡ್ಜ್‌ಬಾಸ್ಟನ್ ಟಿ20 ಮುಖಾಮುಖಿ
ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಏಕೈಕ ಟಿ ಟ್ವೆಂಟಿ ಪಂದ್ಯ ನಡೆದಿದೆ. 2014ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಕಲೆ ಹಾಕಿತ್ತು. ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿ 3 ರನ್‌ಗಳ ಸೋಲನ್ನು ಅನುಭವಿಸಿತು. ಅಷ್ಟೇ ಅಲ್ಲದೆ ಇದೇ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವೆ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಕೂಡ ಟೀಮ್ ಇಂಡಿಯಾ 30 ರನ್‌ಗಳ ಸೋಲನ್ನು ಅನುಭವಿಸಿರುವ ಕೆಟ್ಟ ಅನುಭವವನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications