ಶನಿವಾರ, ಫೆಬ್ರವರಿ 3ರಂದು ವಿಶಾಖಪಟ್ಟಣಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಸಹ ಆಟಗಾರರನ್ನು ಅಶ್ಲೀಲವಾಗಿ ನಿಂದಿಸಿರುವುದು ಕೇಳಿಸಿದೆ.
ಪ್ರವಾಸಿ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನ 31ನೇ ಓವರ್‌ನ ಅಂತ್ಯಕ್ಕೆ 4 ವಿಕೆಟ್‌ಗೆ 143 ರನ್ ಗಳಿಸಿದ್ದಾಗ ಈ ಘಟನೆ ನಡೆದಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹ ಆಟಗಾರರಿಗೆ ಅವಾಚ್ಯವಾಗಿ ಬೈದಿದ್ದಾರೆ.

ಓವರ್‌ನ ಬದಲಾವಣೆಯ ನಡುವೆ ಭಾರತ ತಂಡದ ನಾಯಕ ತನ್ನ ಫೀಲ್ಡರ್‌ಗಳನ್ನು ಕಠಿಣ ಸ್ವರದಲ್ಲಿ ಎಚ್ಚರವಾಗಿರಲು ಹೇಳುತ್ತಿದ್ದರು. ಈ ವೇಳೆ ರೋಹಿತ್ ಶರ್ಮಾ ಕೆಲವು ಅಶ್ಲೀಲ ಭಾಷೆಯನ್ನೂ ಬಳಸಿದ್ದಾರೆ.
ಇದಕ್ಕೂ ಮುನ್ನ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ಫೀಲ್ಡಿಂಗ್‌ನಲ್ಲಿ ಜಡವಾಗಿತ್ತು ಮತ್ತು 28 ರನ್‌ಗಳ ಸೋಲಿನೊಂದಿಗೆ ಬೆಲೆ ತೆರಬೇಕಾಯಿತು.
ಹೀಗಾಗಿ, ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಆಟದ ತೀವ್ರತೆಯನ್ನು ಇಳಿಮುಖವಾಗಲು ಬಯಸಲಿಲ್ಲ ಮತ್ತು ಮೊದಲ ಪಂದ್ಯದಲ್ಲಿ ಸಂಭವಿಸಿದಂತೆ ಪಂದ್ಯವು ಕೈಜಾರಲು ಬಯಸಲಿಲ್ಲ.
"ಕೋಯಿ ಭಿ ಗಾರ್ಡನ್ ಮೇ ಘೂಮೇಗಾ ತೋ, .........." ಎಂದು ರೋಹಿತ್ ಶರ್ಮಾ ಮಾತನಾಡುತ್ತಿರುವುದು ಸ್ಟಂಪ್ ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿದೆ.
ಇನ್ನು ಎರಡನೇ ಟೆಸ್ಟ್ ಪಂದ್ಯದ ಕುರಿತು ಹೇಳುವುದಾದರೆ, ಭಾರತ ತಂಡವು 2ನೇ ದಿನದಂದು 93 ಓವರ್‌ಗಳಲ್ಲಿ 6 ವಿಕೆಟ್‌ಗೆ 336 ರನ್‌ಗಳೊಂದಿಗೆ ತನ್ನ ಇನ್ನಿಂಗ್ಸ್ ಪುನರಾರಂಭಿಸಿತು. ಮೊದಲ ದಿನದಾಟದಂತ್ಯಕ್ಕೆ 179 ರನ್ ಗಳಿಸಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮುಂದುವರೆಸಿದರು.
22 ವರ್ಷದ ಎಡಗೈ ಬ್ಯಾಟರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ದ್ವಿಶತಕ ಬಾರಿಸಿದರು ಮತ್ತು ಸುನಿಲ್ ಗವಾಸ್ಕರ್ ಮತ್ತು ವಿನೋದ್ ಕಾಂಬ್ಳಿ ನಂತರ ಹೆಗ್ಗುರುತನ್ನು ಸಾಧಿಸಿದ ಮೂರನೇ ಕಿರಿಯ ಬ್ಯಾಟರ್ ಎನಿಸಿದರು.

ಆದರೆ, ಯಶಸ್ವಿ ಜೈಸ್ವಾಲ್ ಇತರ ಬ್ಯಾಟರ್‌ಗಳಿಂದ ಹೆಚ್ಚಿನ ಬೆಂಬಲವನ್ನು ಪಡೆಯಲಿಲ್ಲ ಮತ್ತು 209 ರನ್ ಗಳಿಸಿದಾಗ ಸ್ವತಃ ಔಟಾದರು. ಅಂತಿಮವಾಗಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 396 ರನ್‌ಗಳಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 47 ರನ್ ನೀಡಿ 3 ವಿಕೆಟ್ ಪಡೆದರೆ, ಶೋಯೆಬ್ ಬಶೀರ್ ಮತ್ತು ರೆಹಾನ್ ಅಹ್ಮದ್ ತಲಾ ಮೂರು ವಿಕೆಟ್ ಕಬಳಿಸಿದರು.
ಪ್ರತ್ಯುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಜೋಡಿ ಮೊದಲ ವಿಕೆಟ್‌ಗೆ ಕೇವಲ 62 ಎಸೆತಗಳಲ್ಲಿ 59 ರನ್ ಕಲೆಹಾಕಿದರು.
17 ಎಸೆತಗಳಲ್ಲಿ 21 ರನ್ ಗಳಿಸಿ ಆಡುತ್ತಿದ್ದ ಬೆನ್ ಡಕೆಟ್ ಅವರು ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿ ಕ್ಯಾಚ್ ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಝಾಕ್ ಕ್ರಾಲಿ ತನ್ನ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದರು ಮತ್ತು ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಪಾಯಿಂಟ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಅದ್ಭುತ ಫೀಲ್ಡಿಂಗ್‌ನಿಂದಾಗಿ ಔಟಾಗುವ ಮೊದಲು 78 ಎಸೆತಗಳಲ್ಲಿ 76 ರನ್ ಗಳಿಸಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತೆ ಜಸ್ಪ್ರೀತ್ ಬುಮ್ರಾ ಅವರನ್ನು ಮತ್ತೆ ದಾಳಿಗೆ ಕರೆತಂದರು. ಆಗ ಜೋ ರೂಟ್ 10 ಎಸೆತಗಳಲ್ಲಿ 5 ರನ್, ಆಲಿ ಪೋಪ್ 55 ಎಸೆತಗಳಲ್ಲಿ 23 ರನ್ ಮತ್ತು ಜಾನಿ ಬೈರ್‌ಸ್ಟೋವ್ 39 ಎಸೆತಗಳಲ್ಲಿ 25 ರನ್ ಗಳಿಸಿದಾಗ ಅವರ ದೊಡ್ಡ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಅಂತಿಮವಾಗಿ ಇಂಗ್ಲೆಂಡ್ ತಂಡ 55.5 ಓವರ್‌ಗಳಲ್ಲಿ 253 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ದೊಡ್ಡ ಹಿನ್ನಡೆ ಅನುಭವಿಸಿತು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಮಾರಕ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 15.5 ಓವರ್‌ಗಳಲ್ಲಿ 45 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಕುಲದೀಪ್ ಯಾದವ್ 17 ಓವರ್‌ಗಳಲ್ಲಿ 71 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ 5 ಓವರ್‌ಗಳಲ್ಲಿ 28 ರನ್ ಗಳಿಸಿದ್ದು, ಆರಂಭಿಕರಾದ ರೋಹಿತ್ ಶರ್ಮಾ 13 ಮತ್ತು ಯಶಸ್ವಿ ಜೈಸ್ವಾಲ್ 15 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.