ನಾಲ್ಕನೇ ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಪಟೌಡಿ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಎರಡೂ ತಂಡಗಳು ಸಹ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ.
ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಂತರ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಹೀಗೆ ಮೊದಲೆರಡು ಪಂದ್ಯಗಳಲ್ಲಿ ವಿಫಲವಾದ ಇಂಗ್ಲೆಂಡ್ ಭಾರತದ ವಿರುದ್ಧ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವುದರ ಮೂಲಕ ಟೀಮ್ ಇಂಡಿಯಾ ವಿರುದ್ಧ ಸರಣಿ ಮತ್ತು 76 ರನ್‌ಗಳ ಗೆಲುವನ್ನು ಸಾಧಿಸಿತು.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಕ್ಷರಶಃ ಮಂಕಾದರು. ಅದರಲ್ಲಿಯೂ ಟೀಮ್ ಇಂಡಿಯಾ ಬೌಲರ್‌ಗಳು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನೀರಸ ಪ್ರದರ್ಶನವನ್ನು ನೀಡಿದರು. ಹೀಗಾಗಿ ಇಂಗ್ಲೆಂಡ್ ವಿರುದ್ಧ ಸೆಪ್ಟೆಂಬರ್ 2 ರಂದು ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕೆಲವೊಂದಿಷ್ಟು ಬದಲಾವಣೆಗಳು ಆಗಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಇನ್ನು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್ ಇಶಾಂತ್ ಶರ್ಮ ಕಳಪೆ ಪ್ರದರ್ಶನವನ್ನು ನೀಡಿದರು. ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಒಟ್ಟು 22 ಓವರ್‌ಗಳನ್ನು ಎಸೆದ ಇಶಾಂತ್ ಶರ್ಮಾ ಬರೋಬ್ಬರಿ 92 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ಹಾಗೂ ಒಂದೇ ಒಂದು ಮೇಡನ್ ಓವರ್‌ನ್ನು ಕೂಡ ಹಾಕಲಾಗದೇ ಮಂಕಾದರು. ಹೀಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ಇಶಾಂತ್ ಶರ್ಮಾ ಬದಲು ಬೇರೆ ಬೌಲರ್‌ಗಳಿಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡಲಾಗುತ್ತದೆ ಎನ್ನಲಾಗುತ್ತಿದ್ದು ಈ ಕೆಳಕಂಡ 3 ಬೌಲರ್‌ಗಳ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ..

3. ಉಮೇಶ್ ಯಾದವ್
ಇಂಗ್ಲೆಂಡ್ ದೇಶದ ಪಿಚ್‌ಗಳಲ್ಲಿ ಕೇವಲ ವೇಗದ ಬೌಲಿಂಗ್ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವುದಿಲ್ಲ ಬದಲಾಗಿ ಸ್ವಿಂಗ್ ಬೌಲರ್‌ಗಳು ಇಂಗ್ಲೆಂಡ್ ನೆಲದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಅವಕಾಶಗಳಿವೆ. ಓಲ್ಲಿ ರಾಬಿನ್ಸನ್ ಕೂಡ ಸರಣಿಯಲ್ಲಿ ಮಿಂಚುತ್ತಿರುವುದು ಇದೇ ಕಾರಣದಿಂದಲೇ, ಸ್ವಿಂಗ್ ಬೌಲಿಂಗ್ ಅಚ್ಚುಕಟ್ಟಾಗಿ ಬಲ್ಲ ರಾಬಿನ್ಸನ್ ಇಂಗ್ಲೆಂಡ್ ಪಿಚ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಇಶಾಂತ್ ಶರ್ಮಾರನ್ನು ಹೊರಗಿಟ್ಟರೆ ತಂಡದಲ್ಲಿ ಸ್ವಿಂಗ್ ಬೌಲರ್ ಉಮೇಶ್ ಯಾದವ್ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

2. ಶಾರ್ದೂಲ್ ಠಾಕೂರ್
ಟೀಮ್ ಇಂಡಿಯಾ ಬಳಿ ಇರುವ ಮತ್ತೋರ್ವ ಸ್ವಿಂಗ್ ಬೌಲರ್ ಶಾರ್ದೂಲ್ ಠಾಕೂರ್, ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಗಬ್ಬಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 7 ವಿಕೆಟ್‍ಗಳನ್ನು ಪಡೆದು ಮಿಂಚಿದ್ದ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಲ್ಲಿಯೂ 67 ರನ್ ದಾಖಲಿಸಿ ಉತ್ತಮ ಪ್ರದರ್ಶನ ನೀಡಿದ್ದರು.

1. ರವಿಚಂದ್ರನ್ ಅಶ್ವಿನ್
ಸರಣಿಯಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಸಾಮಾಜಿಕ ಜಾಲತಾಣದಲ್ಲಿ ರವಿಚಂದ್ರನ್ ಅಶ್ವಿನ್ ತಂಡದಲ್ಲಿರಬೇಕಿತ್ತು ಎಂಬ ಕೂಗು ಕೇಳಿಬರುತ್ತಿದೆ. ಅಲ್ಲದೇ ಓವಲ್ ಕ್ರೀಡಾಂಗಣದಲ್ಲಿ ಸ್ಪಿನ್ ಬೌಲರ್ ಉತ್ತಮ ಪ್ರದರ್ಶನವನ್ನು ನೀಡಬಹುದಾಗಿದ್ದು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ತಂಡದಿಂದ ಹೊರಗುಳಿದರೆ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications