ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್: ಶಾರ್ದೂಲ್ ಠಾಕೂರ್ ಸ್ಥಾನಕ್ಕೆ ಆಯ್ಕೆಯಾಗಬಹುದಾದ 3 ಆಟಗಾರರು

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯ ಆಗಸ್ಟ್ 12ರಂದು ಆರಂಭವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಲಾರ್ಡ್ಸ್ ಅಂಗಳದ ಸಜ್ಜಾಗುತ್ತಿದ್ದು ಈಗಾಗಲೇ ಎರಡೂ ತಂಡಗಳ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಶಾರ್ದೂಲ್ ಠಾಕೂರ್ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದೆ. ಮಂಡಿರಜ್ಜು ಗಾಯಕ್ಕೊಳಗಾಗಿರುವ ಕಾರಣ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್‍ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಮೊದಲ ಪಂದ್ಯಕ್ಕೆ ಶಾರ್ದೂಲ್ ಠಾಕೂರ್ ಆಯ್ಕೆಯಾದಾಗ ಕ್ರೀಡಾಭಿಮಾನಿಗಳು ಆಶ್ಚರ್ಯಕ್ಕೊಳಗಾಗಿದ್ದರು, ಆದರೆ ಶಾರ್ದೂಲ್ ಠಾಕೂರ್ ಒಳ್ಳೆಯ ಪ್ರದರ್ಶನ ನೀಡುವುದರ ಮೂಲಕ ತನ್ನನ್ನು ಆಯ್ಕೆ ಮಾಡಿದ್ದು ಸರಿಯಾದ ನಿರ್ಧಾರ ಎಂಬುದನ್ನು ಸಾಬೀತುಪಡಿಸಿದರು.
ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 41 ರನ್ ನೀಡಿ ಎರಡು ವಿಕೆಟ್‍ಗಳನ್ನು ಪಡೆದಿದ್ದ ಶಾರ್ದೂಲ್ ಠಾಕೂರ್ ಎರಡನೇ ಇನ್ನಿಂಗ್ಸ್‌ನಲ್ಲಿ 37 ರನ್‌ಗಳನ್ನು ನೀಡಿ ಎರಡು ವಿಕೆಟ್ ಪಡೆದು ಜವಾಬ್ದಾರಿಯುತ ಪ್ರದರ್ಶನವನ್ನು ನೀಡಿದರು. ಹೀಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಟವನ್ನಾಡಿದ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿಯೂ ಆಡುವ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಇದೀಗ ಗಾಯದ ಸಮಸ್ಯೆಗೆ ಒಳಗಾಗಿರುವ ಶಾರ್ದೂಲ್ ಠಾಕೂರ್ ಎರಡನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದ್ದು ಈ ಕೆಳಕಂಡ 3 ಆಟಗಾರರು ಶಾರ್ದೂಲ್ ಠಾಕೂರ್ ಬದಲು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.

3. ಉಮೇಶ್ ಯಾದವ್
2021ರಲ್ಲಿ ಉಮೇಶ್ ಯಾದವ್ ಇದುವರೆಗೂ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ಪಡೆದುಕೊಂಡಿಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಉಮೇಶ್ ಯಾದವ್ ಟೀಮ್ ಇಂಡಿಯಾ ಪರ ಕೊನೆಯದಾಗಿ ಟೆಸ್ಟ್ ಪಂದ್ಯವೊಂದರಲ್ಲಿ ಭಾಗವಹಿಸಿದ್ದರು. ಇನ್ನು ಇಂಗ್ಲೆಂಡ್ ನೆಲದಲ್ಲಿ ಒಂದು ಟೆಸ್ಟ್ ಪಂದ್ಯವನ್ನಾಡಿರುವ ಅನುಭವ ಇರುವ ಉಮೇಶ್ ಯಾದವ್ ಆ ಒಂದು ಪಂದ್ಯದಲ್ಲಿ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಶಾರ್ದೂಲ್ ಠಾಕೂರ್ ಸ್ಥಾನಕ್ಕೆ ಉಮೇಶ್ ಯಾದವ್ ಆಯ್ಕೆಯಾಗುವ ಸಾಧ್ಯತೆ ಕೂಡ ಇದೆ.

2. ಇಶಾಂತ್ ಶರ್ಮಾ
ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರಮುಖ ವೇಗಿ ಇಶಾಂತ್ ಶರ್ಮಾಗೆ ಸ್ಥಾನ ನೀಡದೇ ಇದ್ದದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾಗೆ ಸ್ಥಾನ ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿತ್ತು, ಇದೀಗ ಶಾರ್ದೂಲ್ ಠಾಕೂರ್ ಗಾಯಕ್ಕೊಳಗಾಗಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಶಾರ್ದೂಲ್ ಠಾಕೂರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದ್ದು ಟೀಮ್ ಇಂಡಿಯಾ ವೇಗಿಗಳಿಗೆ ಅವಕಾಶ ನೀಡುವುದಾದರೆ ಇಶಾಂತ್ ಶರ್ಮಾರನ್ನು ಠಾಕೂರ್ ಸ್ಥಾನಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಇನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ತುಂಬ ದೊಡ್ಡ ಮಟ್ಟದ ಅನುಭವವನ್ನೇ ಹೊಂದಿರುವ ಇಶಾಂತ್ ಶರ್ಮಾ ಇದುವರೆಗೂ 102 ಟೆಸ್ಟ್ ಪಂದ್ಯಗಳನ್ನಾಡುವುದರ ಮೂಲಕ 306 ವಿಕೆಟ್‍ಗಳನ್ನು ಪಡೆದಿದ್ದಾರೆ. ಇದೇ ಲಾರ್ಡ್ಸ್ ಅಂಗಳದಲ್ಲಿ 2014ರಲ್ಲಿ ನಡೆದಿದ್ದ ಪಂದ್ಯದಲ್ಲಿ ಇಶಾಂತ್ ಶರ್ಮಾ 74 ರನ್ ನೀಡಿ 7 ವಿಕೆಟ್‍ಗಳನ್ನು ಪಡೆದುಕೊಂಡಿದ್ದರು ಮತ್ತು ಇದು ಇಶಾಂತ್ ಶರ್ಮಾ ಟೆಸ್ಟ್ ಕೆರಿಯರ್‌ನಲ್ಲಿಯೇ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ. ಹಾಗೂ 2011ರಲ್ಲಿ ಆಡಿದ್ದ ತಮ್ಮ ಚೊಚ್ಚಲ ಲಾರ್ಡ್ಸ್ ಪಂದ್ಯದಲ್ಲಿ 59 ರನ್ ನೀಡಿ 4 ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ ಲಾರ್ಡ್ಸ್ ಅಂಗಳದಲ್ಲಿ ಉತ್ತಮ ಆಟವನ್ನು ಆಡಿರುವ ಅನುಭವ ಹೊಂದಿದ್ದಾರೆ. ಹೀಗಾಗಿ ಇಶಾಂತ್ ಶರ್ಮಾಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.

1. ರವಿಚಂದ್ರನ್ ಅಶ್ವಿನ್
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡದೇ ಇದ್ದದ್ದು ಭಾರಿ ಟೀಕೆ ಮತ್ತು ಚರ್ಚೆಗೆ ಕಾರಣವಾಗಿತ್ತು. ಟೆಸ್ಟ್ ತಂಡದ ಪ್ರಮುಖ ಆಟಗಾರನನ್ನೇ ತಂಡದಿಂದ ಕೈಬಿಟ್ಟ ಟೀಮ್ ಇಂಡಿಯಾ ನಡೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿತ್ತು. ಸದ್ಯ ಭಾರತದ ವೇಗಿ ಶಾರ್ದೂಲ್ ಠಾಕೂರ್ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದ್ದು ಠಾಕೂರ್ ಬದಲು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲು ಟೀಮ್ ಇಂಡಿಯಾ ಮುಂದಾಗಬಹುದು. ರವಿಚಂದ್ರನ್ ಅಶ್ವಿನ್ ತಂಡಕ್ಕೆ ಬಂದರೆ ಕೇವಲ ಬೌಲಿಂಗ್ ವಿಭಾಗ ಮಾತ್ರವಲ್ಲ ಬ್ಯಾಟಿಂಗ್ ವಿಭಾಗ ಕೂಡ ವೃದ್ದಿಸುವುದು ಖಚಿತ.
ಇನ್ನು ಇಂಗ್ಲೆಂಡ್ ತಂಡದ ಪ್ರಮುಖ ಬೌಲರ್ ಸ್ಟುವರ್ಟ್ ಬ್ರಾಡ್ ಕೂಡ ಕಾಲಿನ ಹಿಂಭಾಗದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಆಡುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಇಂಗ್ಲೆಂಡ್ ತಂಡ ಕೂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ತನ್ನ ತಂಡದ ಆಟಗಾರರಲ್ಲಿ ಕೆಲ ಬದಲಾವಣೆಗಳನ್ನು ಮಾಡಲಿದೆ. ಗಾಯದ ಸಮಸ್ಯೆಗೊಳಗಾಗಿರುವ ಸ್ಟುವರ್ಟ್ ಬ್ರಾಡ್ ಅವರನ್ನು ಇಂಗ್ಲೆಂಡ್ ತಂಡದಿಂದ ಕೈಬಿಟ್ಟು ಪರ್ಯಾಯ ಆಟಗಾರನ ವ್ಯವಸ್ಥೆ ಮಾಡಲಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಇಂಗ್ಲೆಂಡ್ ತಂಡದ ಪ್ರಮುಖ ಆಲ್ ರೌಂಡರ್ ಮೊಯಿನ್ ಅಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಮೊಯಿನ್ ಅಲಿ ಇಂಗ್ಲೆಂಡ್ ತಂಡವನ್ನು ಸೇರಿಕೊಂಡರೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳು ಬಲಿಷ್ಠಗೊಳ್ಳಲಿದ್ದು ಇಂಗ್ಲೆಂಡ್ ತಂಡಕ್ಕೆ ಅಧಿಕ ಬಲ ಬಂದಂತಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications