ಭಾನುವಾರ, ಫೆಬ್ರವರಿ 18ರಂದು ರಾಜ್‌ಕೋಟ್‌ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ 434 ರನ್‌ಗಳ ಐತಿಹಾಸಿಕ ಗೆಲುವು ದಾಖಲಿಸಿತು.
ಇದು ಟೀಮ್ ಇಂಡಿಯಾದ 577 ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿ ರನ್‌ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವಾಗಿದೆ ಮತ್ತು ಭಾರತ ತಂಡ 400 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಅಂತರದಿಂದ ಗೆದ್ದಿರುವುದು ಇದೇ ಮೊದಲ ಬಾರಿಗೆ.

ಭಾರತ ತಂಡವು 2021ರಲ್ಲಿ ನ್ಯೂಜಿಲೆಂಡ್ ವಿರುದ್ಧದ ತಮ್ಮ 372 ರನ್‌ಗಳ ಅಂತರದ ಗೆಲುವನ್ನು ಉತ್ತಮಗೊಳಿಸಿತು. ಈ ಗೆಲುವಿನ ಮೂಲಕ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ ಮತ್ತು 2024-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ನಂತರ ಎರಡನೇ ಸ್ಥಾನದಲ್ಲಿದೆ.
ನ್ಯೂಜಿಲೆಂಡ್ ನಾಲ್ಕು ಟೆಸ್ಟ್ ಪಂದ್ಯಗಳ ನಂತರ ಶೇ.75 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಭಾರತ ತಂಡ ಶೇ.59.52ರಷ್ಟು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಶೇ.55 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕಿಳಿದಿದೆ.
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಪಂದ್ಯಕ್ಕೆ ಬರುವುದಾದರೆ, ಯಶಸ್ವಿ ಜೈಸ್ವಾಲ್ ಅವರ ಅಜೇಯ ದ್ವಿಶತಕ ಮತ್ತು ರವೀಂದ್ರ ಜಡೇಜಾ ಅವರ ಐದು ವಿಕೆಟ್‌ಗಳ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ದಾಖಲೆಯ 434 ರನ್‌ಗಳಿಂದ ಸೋಲಿಸಿತು.

ರವೀಂದ್ರ ಜಡೇಜಾ ಅವರು 33 ರನ್ ಗಳಿಸಿದ್ದ ಮಾರ್ಕ್ ವುಡ್ ಅವರನ್ನು ಅಂತಿಮವಾಗಿ ಔಟ್ ಮಾಡುವ ಮೂಲಕ ಭಾರತ ತಂಡ ರನ್‌ಗಳ ವಿಷಯದಲ್ಲಿ ತಮ್ಮ ಅತಿದೊಡ್ಡ ಗೆಲುವನ್ನು ದಾಖಲಿಸಿತು.
ಇದಕ್ಕೂ ಮುನ್ನ ಇನ್ನು ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 98 ಓವರ್‌ಗಳಲ್ಲಿ 4 ವಿಕೆಟ್‌ಗೆ 430 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ 557 ರನ್‌ಗಳ ಬೃಹತ್ ಗುರಿ ನೀಡಿದೆ.
ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ 236 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 12 ಸಿಕ್ಸರ್‌ಗಳ ಸಮೇತ ಅಜೇಯ 214 ರನ್ ಬಾರಿಸಿದರು. ಇದೇ ವೇಳೆ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ ಅಜೇಯ 68 ರನ್ ಗಳಿಸಿದರು.
ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಜೋಡಿ ಮುರಿಯದ ಐದನೇ ವಿಕೆಟ್‌ಗೆ 158 ಎಸೆತಗಳಲ್ಲಿ 172 ರನ್‌ಗಳ ಜೊತೆಯಾಟ ನಿರ್ಮಿಸಿದರು.