IND vs ENG 4th T20: ಸರಣಿ ಗೆಲುವಿಗೆ ಭಾರತದ ಬಲಿಷ್ಠ ಸಂಭಾವ್ಯ ಪ್ಲೇಯಿಂಗ್-11
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ನಾಳೆ ಅಂದರೆ ಶುಕ್ರವಾರ, ಜನವರಿ 31 ರಂದು ಸಂಜೆ 7:00 ಗಂಟೆಗೆ ನಡೆಯಲಿದೆ. ಉಭಯ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಪುಣೆಯಲ್ಲಿ ನಡೆಯಲಿದೆ. ಸರಣಿಯ ಮೂರು ಪಂದ್ಯಗಳ ನಂತರ ಭಾರತ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ನಾಲ್ಕನೇ ಟಿ20 ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಆಡುವ ಹನ್ನೊಂದರಲ್ಲಿ ಬದಲಾವಣೆ ಆಗಬಹುದು. ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಗೆಲುವು ಕಂಡಿರುವ ಇಂಗ್ಲೆಂಡ್ ತನ್ನ ಇಲೆವೆನ್‌ನಲ್ಲಿ ಬದಲಾವಣೆ ಮಾಡುವುದು ಅನುಮಾನವಾಗಿದೆ.
ಟೀಮ್ ಇಂಡಿಯಾದಲ್ಲಿ ಒಂದಕ್ಕಿಂತ ಹೆಚ್ಚು ಅಪಾಯಕಾರಿ ಆಟಗಾರರಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಯೋಜಿಸುತ್ತಿದೆ. ಈ ಮೂಲಕ ಟೀಮ್ ಇಂಡಿಯಾ ತವರಿನಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾಕ್ಕೆ ಸ್ಫೋಟಕ ಆರಂಭ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಸಂಜು ಸ್ಯಾಮ್ಸನ್ ಇದುವರೆಗಿನ ಈ ಸರಣಿಯಲ್ಲಿ ಅಬ್ಬರಿಸಿಲ್ಲ. ಮತ್ತೊಂದೆಡೆ ಅಭಿಷೇಕ್ ಶರ್ಮಾ ಮೊದಲ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ನಂತರ ಸೈಲೆಂಟ್ ಆಗಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿದ್ದಾರೆ. ಕಳೆದ 6 ಟಿ20 ಇನ್ನಿಂಗ್ಸ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಮೌನವಾಗಿದೆ. ಸೂರ್ಯಕುಮಾರ್ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಪುಣೆಯಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಫಾರ್ಮ್‌ಗೆ ಮರಳಲುವ ಸಾಧ್ಯತೆಯಿದೆ.
ತಿಲಕ್ ವರ್ಮಾ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಇತ್ತೀಚಿನ ಐಸಿಸಿ ಟಿ20 ಶ್ರೇಯಾಂಕದಲ್ಲಿ ತಿಲಕ್ ವರ್ಮಾ ವಿಶ್ವದ ನಂಬರ್-2 ಬ್ಯಾಟರ್ ಆಗಿದ್ದಾರೆ. ತಿಲಕ್ ವರ್ಮಾ ಭಾರತ ಪರ 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 55.77ರ ಸರಾಸರಿಯಲ್ಲಿ 725 ರನ್ ಗಳಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಿಲಕ್ ವರ್ಮಾ 2 ಶತಕ ಹಾಗೂ 3 ಅರ್ಧ ಶತಕ ಸಿಡಿಸಿದ್ದಾರೆ. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರಬಹುದು. ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟರ್, ಅಪಾಯಕಾರಿ ಬೌಲರ್ ಮತ್ತು ಚಾಣಾಕ್ಷ ಫೀಲ್ಡರ್. ಕೇವಲ ಒಂದೇ ಓವರ್‌ನಲ್ಲಿ ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಬಲ್ಲ ಅಪಾಯಕಾರಿ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಹೀಗಾಗಿ ಪಾಂಡ್ಯ ಆಡುವ ಹನ್ನೊಂದರ ಬಗಳದಲ್ಲಿ ಇರಲಿದ್ದಾರೆ.
ರಿಂಕು ಸಿಂಗ್ ಕೆಳ ಬೆನ್ನಿನ ಸ್ನಾಯುಗಳ ಒತ್ತಡದಿಂದಾಗಿ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಿಂದ ಹೊರಗುಳಿದಿದ್ದರು. ಈಗ ಫಿನಿಶರ್ ರಿಂಕು ಸಿಂಗ್ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು.
ರಿಂಕು ಸಿಂಗ್ ಮಧ್ಯಮ ಓವರ್‌ಗಳಲ್ಲಿ ಮತ್ತು ಡೆತ್ ಓವರ್‌ಗಳಲ್ಲಿ ಸಿಕ್ಸರ್ ಬಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಬಹುದು. ವಾಷಿಂಗ್ಟನ್ ಉತ್ತಮ ಆಫ್-ಸ್ಪಿನ್ ಬೌಲರ್ ಮತ್ತು ಕೆಳ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.
ಸ್ಪಿನ್ ಬೌಲರ್‌ಗಳಾಗಿ ಅಕ್ಸರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರಲಿದ್ದಾರೆ. ಅಕ್ಸರ್ ಪಟೇಲ್ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಬಿರುಗಾಳಿ ಎಬ್ಬಿಸಬಲ್ಲರು. ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ವಿಕೆಟ್ ಕಬಳಿಸುವಲ್ಲಿ ಮುಂದಿದ್ದಾರೆ.
ರವಿ ಬಿಷ್ಣೋಯ್ ಅವರನ್ನು ಆಡುವ ಹನ್ನೊಂದರಿಂದ ಕೈಬಿಡಬಹುದು.
ಮೊಹಮ್ಮದ್ ಶಮಿ ಜೊತೆಗೆ ಅರ್ಷದೀಪ್ ಸಿಂಗ್ ನಾಲ್ಕನೇ ಟಿ20 ಪಂದ್ಯಕ್ಕೆ ಆಡುವ ಹನ್ನೊಂದರಲ್ಲಿ ಆಯ್ಕೆಯಾಗಬಹುದು. ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ಆಂಗ್ಲರ ಪಡೆಗೆ ಕಾಡಲು ಸಜ್ಜಾಗಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮೂರನೇ ವೇಗದ ಬೌಲರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಭಾರತ ಪ್ಲೇಯಿಂಗ್-11
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications