ಪುಣೆಯಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದ ವೇಳೆ ದೊಡ್ಡ ವಿವಾದವೊಂದು ಬೆಳಕಿಗೆ ಬಂದಿದೆ. ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಆದರೆ ಈ ಪಂದ್ಯದ ವೇಳೆ, ಭಾರತದ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಶಿವಂ ದುಬೆ ಅವರ ಹೆಲ್ಮೆಟ್‌ಗೆ ಚೆಂಡು ಬಡಿದು ಗಾಯಗೊಂಡಿದ್ದರು. ನಂತರ, ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಕನ್ಕ್ಯುಶನ್ ಬದಲಿಯಾಗಿ ತಂಡಕ್ಕೆ ಸೇರಿಸಲಾಯಿತು. ಇದೀಗ ಕನ್ಕ್ಯುಶನ್ ಬದಲಿಯಾಗಿ ಹರ್ಷಿತ್ ರಾಣಾ ಕಣಕ್ಕಿಳಿದ ಬಗ್ಗೆ ಜೋಸ್ ಬಟ್ಲರ್ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಸ್ ಮೊದಲು ಬ್ಯಾಟಿಂಗ್ ಮಾಡಿದ ಟಿಮ್ ಇಂಡಿಯಾ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ವೇಗಿ ಜೇಮಿ ಓವರ್‌ಟನ್ ಅವರ ಐದನೇ ಎಸೆತದಲ್ಲಿ ಚೆಂಡು ಶಿವಂ ದುಬೆ (53 ರನ್) ಹೆಲ್ಮೆಟ್‌ಗೆ ಬಡಿಯಿತು. ನಂತರ ಅವರು ಫೀಲ್ಡಿಂಗ್ ಮಾಡಲು ಸಾಧ್ಯವಾಗದೆ ಆಟದಿಂದ ಹೊರಗುಳಿದರು. ಹೀಗಾಗಿ ಟೀಮ್ ಇಂಡಿಯಾ ಕನ್ಕ್ಯುಶನ್ ಸಬ್ ಆಯ್ಕೆಯ ಮೊರೆ ಹೋಯಿತು. ಕನ್ಕ್ಯುಶನ್ ಸಬ್ ಆಯ್ಕೆ ಎಂದರೆ ಗಾಯಗೊಂಡ ಅಥವಾ ಇತರೆ ಕಾರಣಗಳಿಂದ ಹೊರಗುಳಿದಿರುವ ಆಟಗಾರನ ಬದಲಿಗೆ ಬೇರೆ ಆಟಗಾರನನ್ನು ಕಣಕ್ಕಿಳಿಸುವುದು.

ಈ ನಿಯಮದ ಪ್ರಕಾರ, ಆಲ್‌ರೌಂಡರ್ ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಅವರಂತಹ ಸ್ಪೆಷಲಿಸ್ಟ್ ವೇಗದ ಬೌಲರ್‌ಗೆ ಬೌಲಿಂಗ್ ಮಾಡಲು ಕರೆ ನೀಡಿದಾಗ ಪಂದ್ಯದಲ್ಲಿ ನಿರ್ಣಾಯಕ ತಿರುವು ಬಂದಿತು. ಶಿವಂ ದುಬೆ ಬದಲಿಗೆ ಕಣಕ್ಕಿಳಿದ ಹರ್ಷಿತ್ ರಾಣಾ ಪಂದ್ಯವನ್ನು ತಲೆಕೆಳಗಾಗಿಸಿದರು. ಅವರು ತಮ್ಮ 4 ಓವರ್ ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು. ಹರ್ಷಿತ್ ರಾಣಾ ಈ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಟೀಮ್ ಇಂಡಿಯಾ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟೀಮ್ ಇಂಡಿಯಾ ಪ್ರಾಮಾಣಿಕವಾಗಿ ಆಡಿಲ್ಲ ಎಂದಿದ್ದಾರೆ.
ಐಸಿಸಿ 2019 ರಲ್ಲಿ ಕನ್ಕ್ಯುಶನ್ ಸಬ್ ಆಯ್ಕೆ ನಿಯಮವನ್ನು ಪರಿಚಯಿಸಿತು. ಈ ನಿಯಮದ ಪ್ರಕಾರ ಲೈಕ್ ಟು ಲೈಕ್ ಆಟಗಾರ ಆಡಬೇಕು. ಅದಂರೆ ಬ್ಯಾಟರ್ ಬ್ಯಾಟರ್ ಗಾಯಗೊಂಡು ಪಂದ್ಯದಿಂದ ಹೊರಗುಳಿದರೆ ಬ್ಯಾಟರ್‌ನನ್ನೇ ಆಡಿಸಬೇಕು. ಅಥವಾ ಬೌಲರ್ ಗಾಯಗೊಂಡರೆ, ಬದಲಿ ಆಯ್ಕೆಯಾಗಿ ಬೌಲರ್‌ನನ್ನೇ ಆಡಿಸಬೇಕು. ಇನ್ನೂ ಆಲ್‌ರೌಂಡರ್‌ಗೆ ಬದಲಿಯಾಗಿ ಆಲ್‌ರೌಂಡರ್ ಆಡಬೇಕೆಂಬ ನಿಯಮವಿದೆ. ಆದರೆ ಟೀಮ್ ಇಂಡಿಯಾ ಆಲ್‌ರೌಂಡರ್ ಶಿವಂ ದುಬೆ ಬದಲಿಗೆ ಕನ್ಕ್ಯುಶನ್ ಬದಲಿಯಾಗಿ ವೇಗದ ಬೌಲರ್ ಹರ್ಷಿತ್ ರಾಣಾ ಕಣಕ್ಕಿಳಿಸಿರುವುದು ಜೋಸ್ ಬಟ್ಲರ್ ಕೋಪಕ್ಕೆ ಕಾರಣವಾಗಿದೆ.
ಹರ್ಷಿತ್ ರಾಣಾ ಕನ್ಕ್ಯುಶನ್ ಬದಲಿ ಆಟಗಾರನಾಗಿರಲಿಲ್ಲ. ನಾವು ಇದನ್ನು ಒಪ್ಪುವುದಿಲ್ಲ. ದುಬೆ ಆಲ್‌ರೌಂಡರ್ ಆಗಿದ್ದರೂ, ಟೀಮ್ ಇಂಡಿಯಾ ಪರಿಪೂರ್ಣ ಬೌಲರ್‌ನನ್ನು ಬದಲಿಯಾಗಿ ಆಡಿಸಿರುವುದು ಪ್ರಾಮಾಣಿಕವಾಗಿಲ್ಲ ಎಂದು ಬಟ್ಲರ್ ಹೇಳಿದ್ದಾರೆ.
ಶಿವಂ ದುಬೆ ಗಂಟೆಗೆ ಸುಮಾರು 25 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಇತ್ತ ಹರ್ಷಿತ್ ರಾಣಾ ಬ್ಯಾಟಿಂಗ್ ಮಾಡಬಲ್ಲರು ಎಂದೇಳುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಕನ್ಕ್ಯುಶನ್ ಸಬ್ ಅನ್ನು ಅನುಮತಿಸುವ ಮುನ್ನ ಮ್ಯಾಚ್ ರೆಫರಿಗೆ ಹೆಚ್ಚಿನ ಸ್ಪಷ್ಟತೆ ಇರಬೇಕು ಎಂದು ಬಟ್ಲರ್ ತಿಳಿಸಿದ್ದಾರೆ.