IND vs ENG: ಬಜ್‌ಬಾಲ್ ನೆಚ್ಚಿಕೊಂಡು ಕೈಸುಟ್ಟುಕೊಂಡ ಇಂಗ್ಲೆಂಡ್; ಭಾರತ ಎದುರು ಸರಣಿ ಸೋತ ಆಂಗ್ಲ ಪಡೆ
ಸೋಮವಾರ, ಫೆಬ್ರವರಿ 26ರಂದು ರಾಂಚಿಯಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆತಿಥೇಯ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿತು. ಅಲ್ಲದೆ ಐದು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 3-1 ಅಂತರದಿಂದ ವಶಪಡಿಸಿಕೊಂಡಿತು.
ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 2010-11ರಿಂದ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಭಾರತ ತಂಡ ಯಾವುದೇ ಟೆಸ್ಟ್ ಸರಣಿ ಸೋತಿಲ್ಲದ ದಾಖಲೆಯನ್ನು ಮುಂದುವರೆಸಿದೆ. 2010-11ರಲ್ಲಿ ಅಲೆಸ್ಟರ್ ಕುಕ್ ನಾಯಕತ್ವದ ಇಂಗ್ಲೆಂಡ್ ತಂಡ ಭಾರತದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿ ಗೆಲುವು ಸಾಧಿಸಿತ್ತು.

ಇನ್ನು ಈ ನಾಲ್ಕನೇ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 192 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ, ಮೂರನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. ಸೋಮವಾರ ನಾಲ್ಕನೇ ದಿನದ ಆಟ ಮುಂದುವರೆಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನಿರ್ಮಿಸಿ ಉತ್ತಮ ಆರಂಭ ನೀಡಿದರು.
ಆದರೆ, ದಿಢೀರ್ ಆಗಿ ನಡೆದ ನಾಟಕೀಯ ಬೆಳವಣಿಯಲ್ಲಿ ಭಾರತ ತಂಡ ಪಟಪಟನೆ ವಿಕೆಟ್ ಕಳೆದುಕೊಂಡಿತು. 44 ಎಸೆತಗಳಲ್ಲಿ 37 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಜೋ ರೂಟ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ನಾಯಕ ರೋಹಿತ್ ಶರ್ಮಾ ಕೂಡ 81 ಎಸೆತಗಳಲ್ಲಿ 55 ರನ್ ಬಾರಿಸಿ ಔಟಾದರು.
ನಂತರ ಬಂದ ರಜತ್ ಪಾಟಿದಾರ್ ಡಕ್‌ಗೆ ಔಟಾಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರದ ಎಸೆತದಲ್ಲೇ ಸರ್ಫರಾಜ್ ಖಾನ್ ಕೂಡ ಔಟಾದರು.

120 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದು ಶುಭ್ಮನ್ ಗಿಲ್ಲ ಮತ್ತು ಧ್ರುವ್ ಜುರೆಲ್ ಜೋಡಿ. ಇವರಿಬ್ಬರು ಮುರಿಯದ ಆರನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ಗುರಿ ತಲುಪಿಸಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶುಭ್ಮನ್ ಗಿಲ್ 124 ಎಸೆತಗಳಲ್ಲಿ 2 ಸಿಕ್ಸರ್ ಸಮೇತ ಅಜೇಯ 52 ರನ್ ಬಾರಿಸಿದರೆ, ಧ್ರುವ್ ಜುರೆಲ್ 77 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ ಅಜೇಯ 39 ರನ್ ಗಳಿಸಿದರು. ಗಮನಾರ್ಹವಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ ಧ್ರುವ್ ಜುರೆಲ್ ನಿರ್ಣಾಯಕ 90 ರನ್ ಗಳಿಸಿದ್ದರು.
ಮತ್ತೊಂದೆಡೆ, ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಶೋಯೆಬ್ ಬಶೀರ್ 3 ವಿಕೆಟ್ ಪಡೆದರೆ, ಜೋ ರೂಟ್ ಮತ್ತು ಟಾಮ್ ಹಾರ್ಟ್ಲಿ ತಲಾ ಒಂದೊಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 3-1 ಮುನ್ನಡೆ ಸಾಧಿಸಿ, ಸರಣಿ ವಶಪಡಿಸಿಕೊಂಡಿತು. ಅಲ್ಲದೆ, ಬಜ್‌ಬಾಲ್ ಯುಗದಲ್ಲಿ ಇಂಗ್ಲೆಂಡ್ ತಂಡಕ್ಕೆ ಇದು ಮೊದಲ ಟೆಸ್ಟ್ ಸರಣಿ ಸೋಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications