
ಚೆನ್ನೈ: ಇಂಗ್ಲೆಂಡ್‌ನ ಬಲಗೈ ಆಫ್ ಬ್ರೇಕ್ ಬೌಲರ್ ಡೊಮಿನಿಕ್ ಬೆಸ್ ಅವರ ಮೇಲೆ ಜಾಹೀರಾತು ಬೋರ್ಡ್ ಬಿದ್ದಿರುವ ಘಟನೆ ನಡೆದಿದೆ. ಭಾರತ-ಇಂಗ್ಲೆಂಡ್ ಮೂರನೇ ದಿನದಾಟದ ವೇಳೆ ಬೆಸ್ ತಲೆಯ ಮೇಲೆ ಜಾಹೀರಾತು ಬೋರ್ಡ್ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ (ಫೆಬ್ರವರಿ 7) ಮೂರನೇ ದಿನದಾಟದ ಮುಕ್ತಾಯದ ಬಳಿಕ ಡಾಮ್ ಬೆಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಜಾಹೀರಾತು ಬೋರ್ಡ್ ಬೆಸ್ ತಲೆಯ ಮೇಲೆ ಉರುಳಿದಿದೆ. ಆಕಸ್ಮಾತ್ ನಡೆದ ಘಟನೆಗೆ ಬೆಸ್ ಒಮ್ಮೆಲೆ ತಬ್ಬಿಬ್ಬಾದರಾದರೂ ಮರುಕ್ಷಣ ಸಾವರಿಸಿಕೊಂಡು ಮಾತು ಮುಂದುವರೆಸಿದರು.
23ರ ಹರೆಯದ ಡಾಮ್ ಬೆಸ್ ಅವರು ಭಾರತದ ಮೊದಲನೇ ಇನ್ನಿಂಗ್ಸ್‌ನಲ್ಲಿ ಒಟ್ಟು 26 ಓವರ್ ಎಸೆದು 76 ರನ್ ನೀಡಿದ್ದರು. 4 ವಿಕೆಟ್‌ಗಳು ಬೆಸ್‌ಗೆ ಲಭಿಸಿತ್ತು. ಇದರಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕೂಡ ಸೇರಿತ್ತು.
ಚೆನ್ನೈನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್ ಕಲೆ ಹಾಕಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್ ಬಾರಿಸಿ 241 ರನ್ ಹಿನ್ನಡೆ ಅನುಭವಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕಡಿಮೆ ಟೋಟಲ್ (178 ರನ್) ಮಾಡಿ, ಭಾರತ ಗೆಲ್ಲಲು 420 ರನ್ ಗುರಿ ನೀಡಿದೆ.