
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿರಾಟ್ ಕೊಹ್ಲಿ ಪಡೆಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಬಿಟ್ಟುಕೊಟ್ಟರು. ಹೀಗೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ವಿರಾಟ್ ಕೊಹ್ಲಿ ಪಡೆ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 276 ಗಳಿಸಿತ್ತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅಬ್ಬರದ ಶತಕವನ್ನು ಬಾರಿಸಿ ಮಿಂಚಿದರೆ, ರೋಹಿತ್ ಶರ್ಮಾ 83 ಮತ್ತು ವಿರಾಟ್ ಕೊಹ್ಲಿ 42 ರನ್ ಬಾರಿಸಿ ಜವಾಬ್ದಾರಿಯುತ ಆಟವನ್ನಾಡಿದರು.
ಇಂಗ್ಲೆಂಡ್ ವಿರುದ್ಧ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಮೊದಲನೆಯ ಎಸೆತದಲ್ಲಿಯೇ ಕ್ಯಾಚ್ ನೀಡುವ ಮೂಲಕ ಗೋಲ್ಡನ್ ಡಕ್ ಔಟ್ ಆಗಿದ್ದರು. ಹೀಗೆ ಮೊದಲನೇ ಪಂದ್ಯದಲ್ಲಿ ಡಕ್ ಔಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿಹೆಚ್ಚು ಬಾರಿ ಡಕ್ ಔಟ್ ಆಗಿರುವ ಭಾರತ ತಂಡದ ನಾಯಕ ಎಂಬ ಕೆಟ್ಟ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡರು. ಮೊದಲನೇ ಪಂದ್ಯದಲ್ಲಿ ಡಕ್ ಔಟ್ ಆಗುವ ಮೂಲಕ ಕಳಪೆ ಫಾರ್ಮ್ ಮುಂದುವರಿಸಿದ ವಿರಾಟ್ ಕೊಹ್ಲಿ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 42 ಬಾರಿಸಿ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿಯ 42 ರನ್‌ಗಳ ಇನ್ನಿಂಗ್ಸ್ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಕೆಲವರು ವಿರಾಟ್ ಕೊಹ್ಲಿಯವರ ಹೋರಾಟದ ಇನ್ನಿಂಗ್ಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಇನ್ನೂ ಕೆಲವರು ವಿರಾಟ್ ಕೊಹ್ಲಿ ಮತ್ತೆ ತಮ್ಮ ಕಳಪೆ ಫಾರ್ಮ್ ಮುಂದುವರಿಕೆ ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ. ಈ ಕುರಿತು ಇದೀಗ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಮಾತನಾಡಿದ್ದು 'ಕಳಪೆ ಫಾರ್ಮ್‌ನಲ್ಲಿರುವಂತಹ ಅತ್ಯದ್ಭುತ ಕ್ರಿಕೆಟಿಗರು ಮಾತ್ರ ಕಷ್ಟದ ಸಂದರ್ಭಗಳಲ್ಲಿ ಹೋರಾಡಲು ಸಾಧ್ಯ. ಅದನ್ನೇ ಲಾರ್ಡ್ಸ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದಾರೆ' ಎಂದು ವಿರಾಟ್ ಕೊಹ್ಲಿ ಬ್ಯಾಟಿಂಗ್‌ನ್ನು ಅಜಿತ್ ಅಗರ್ಕರ್ ಸಮರ್ಥಿಸಿಕೊಂಡಿದ್ದಾರೆ.
ಅದರಲ್ಲಿಯೂ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರ ಕೆಎಲ್ ರಾಹುಲ್‌ಗೆ ನೀಡಿದ ಜೊತೆಯಾಟ ಅತ್ಯುತ್ತಮ ಆಗಿತ್ತು. ಕೆಎಲ್ ರಾಹುಲ್ ಜೊತೆ 117 ರನ್‌ಗಳ ಜೊತೆಯಾಟವನ್ನು ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ರನ್ ಗಳಿಕೆಯಲ್ಲಿ ಏರಿಕೆಯ ಆಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೋಲ್ಡನ್ ಡಕೌಟ್ ಆಗಿದ್ದ ಕಾರಣ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಜಾಗರೂಕತೆಯಿಂದ ಬ್ಯಾಟಿಂಗ್ ನಡೆಸಿದರು. ಹೇಗಾದರೂ ಮಾಡಿ ಉತ್ತಮ ಫಾರ್ಮ್‌ಗೆ ಮರಳಬೇಕೆನ್ನುವ ಯೋಜನೆ ವಿರಾಟ್ ಕೊಹ್ಲಿ ಆಡುತ್ತಿದ್ದ ಜವಾಬ್ದಾರಿಯುತ ಆಟದಲ್ಲಿ ಕಾಣಿಸುತ್ತಿತ್ತು ಕೂಡ ಹೌದು. ಸದ್ಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 42 ರನ್ ಬಾರಿಸಿ ಸಾಧಾರಣ ಆಟವನ್ನಾಡಿರುವ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವ ರೀತಿಯ ಪ್ರದರ್ಶನವನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು..